top of page

ಡಿವಿಜಿ ಯವರ ಮಂಕುತಿಮ್ಮನ ಕಗ್ಗಗಳು – ಸಂಪೂರ್ಣ ೯೪೫ ಕಗ್ಗಗಳು

ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ||
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |
ಎಲ್ಲರೊಳಗೊಂದಾಗು – ಮಂಕುತಿಮ್ಮ || ಕಗ್ಗ ೧ ||

ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ |
ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ||
ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ |
ಭರಿಸುತಿರುವುದು ಬಾಳ – ಮಂಕುತಿಮ್ಮ || ಕಗ್ಗ ೨ ||

ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ |
ಶೈಲದಚಲತೆಯಿರಲು ಝರಿಯ ವೇಗ ಸೊಗ ||
ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು |
ವೈಲಕ್ಷಣದ ಚೆಂದ – ಮಂಕುತಿಮ್ಮ || ಕಗ್ಗ ೩ ||

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ |
ವಹಿಸೆ ಜೀವನಭರವನದು ಹಗುರೆನಿಪವೊಲ್ ||
ಸಹನೆ ಸಮರಸಭಾವವಂತಃಪರೀಕ್ಷೆಗಳು |
ವಿಹಿತವಾತ್ಮದ ಹಿತಕೆ – ಮಂಕುತಿಮ್ಮ || ಕಗ್ಗ ೪ ||

ಕೊಳಕೆಂದು; ಹುಳುಕೆಂದು; ಹೇಸಿಗೆಯ ಹುಳುವೆಂದು |
ಇಳೆಯೊಳಾವುದರೊಳಮಸಹ್ಯಪಡಬೇಡ ||
ಬೆಲೆಯುಂಟು ಕೊಳೆಗಮೀ ಜೀವಸಾಮಗ್ರಿಯಲಿ |
ಕೊಳೆ ಶುಚಿಖ್ಯಾಪಕವೊ – ಮಂಕುತಿಮ್ಮ || ಕಗ್ಗ ೫ ||

ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ||
ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೊ? – ಮಂಕುತಿಮ್ಮ || ಕಗ್ಗ ೬ ||

ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? |
ಮತಿಮನಂಗಳ ಕೃಷಿತಪಃಫಲವುಮಂತು ||
ಸತತಕೃಷಿ; ಬೀಜಗುಣ; ಕಾಲವರ್ಷಗಳೊದವೆ |
ಪ್ರತಿಭೆ ವಿಕಸಿತವಹುದೊ – ಮಂಕುತಿಮ್ಮ || ಕಗ್ಗ ೭ ||

ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ |
ಶಕ್ತಿ ಚತುರತೆಯುಡುಗಿ ನೀನು ಸೋತಂದು ||
ಉತ್ಕ್ರಮಣದರೆಮನದಿ ದೈವವನು ಪಿಡಿದೇನು? |
ಭಕ್ತಿ ರಕ್ತದಿ ಪರಿಗೆ – ಮಂಕುತಿಮ್ಮ || ಕಗ್ಗ ೮ ||

ಸಾಕುಸಾಕೆನಿಸುವುದು ಲೋಕಸಂಪರ್ಕಸುಖ |
ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ||
ಮೂಕನವೆ ತುರಿಸದಿರೆ; ತುರಿಯುತಿರೆ ಹುಣ್ಣುರಿತ |
ಮೂಕನಪಹಾಸ್ಯವದು – ಮಂಕುತಿಮ್ಮ || ಕಗ್ಗ ೯ ||

ಬುದ್ಧಿಮಾತಿದು ನಿನಗೆ : ಸಿದ್ಧನಿರು ಸಕಲಕ್ಕಮ್ |
ಎದ್ದು ಕುಣಿಯಲಿ ಕರ್ಮ; ದೈವ ನಿದ್ರಿಸಲಿ ||
ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ |
ಸಿದ್ಧನಾಗೆಲ್ಲಕಂ – ಮಂಕುತಿಮ್ಮ || ಕಗ್ಗ ೧೦ ||

ಸ್ರವಿಸುವುದು ಜೀವರಸ ಹೃದಯಗರ್ತದ ತಳದಿ |
ಕಿವಿಗಾ ರಹಸ್ಯದುಲಿ ಕಾವ್ಯಗಾನಗಳಿಂ ||
ಭುವನದಾಚಿನ ರಹಸ್ಯದ ಕೀರ್ತಿ ವೇದಗಳ |
ರವದಿನೆಂದಾರ್ಷಮತ – ಮಂಕುತಿಮ್ಮ || ಕಗ್ಗ ೧೧ ||

ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ? |
ಸಾಜವನು ಬಿಟ್ಟಲುಗದಿಹುದು ಮೃಗಕೀಟ ||
ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು |
ಯೋಜಿಪುದೆ ನರಮಹಿಮೆ – ಮಂಕುತಿಮ್ಮ || ಕಗ್ಗ ೧೨ ||

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? |
ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ||
ಏನೊ ಜೀವವನೆಳೆವುದೇನೊ ನೂಕುವುದದನು |
ನೀನೊಂದು ಗಾಳಿಪಟ – ಮಂಕುತಿಮ್ಮ || ಕಗ್ಗ ೧೩ ||

ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು |
ವಿಷದೂಟಕಿಂತುಪೋಷಿತವೆ ಲೇಸಲ್ತೆ? ||
ತೃಷೆ ಕನಲೆ; ಜೀವ ಬಿಸಿಬಾಣಲಿಗೆ ಬಿದ್ದ ಹುಳು |
ಶಿಶು ಪಿಶಾಚಿಯ ಕೈಗೆ – ಮಂಕುತಿಮ್ಮ || ಕಗ್ಗ ೧೪ ||

ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ |
ಎತ್ತಲೋ ಸಖನೊರ್ವನಿಹನೆಂದು ನಂಬಿ ||
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು |
ಭಕ್ತಿಯಂತೆಯೆ ನಮದು – ಮಂಕುತಿಮ್ಮ || ಕಗ್ಗ ೧೫ ||

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? |
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು? ||
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ |
ಪರಿಕಿಸಿದೊಡದು ಲಾಭ – ಮಂಕುತಿಮ್ಮ || ಕಗ್ಗ ೧೬ ||

ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ |
ಮೂಲೆಮುಲೆಯಲಿ ವಿದ್ಯುಲ್ಲಹರಿಯೊಂದು ||
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ || ಕಗ್ಗ ೧೭ ||

ಅಣು ಭೂತ ಭೂಗೋಲ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ |
ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || ಕಗ್ಗ ೧೮ ||

 

ರಾಮನುಚ್ಛ್ವಾಸವಲೆದಿರದೆ ರಾವಣನೆಡೆಗೆ? |
ರಾಮನುಂ ದಶಕಂಠನೆಲರನುಸಿರಿರನೆ? ||
ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ? |
ಭೂಮಿಯಲಿ ಪೊಸತೇನೊ? – ಮಂಕುತಿಮ್ಮ || ಕಗ್ಗ ೧೯ ||

 

ಪದರಪದರಗಳಿಹುವು ಗಂಟುಗಂಟುಗಳಿಹುವು |
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ||
ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ? |
ವಿಧಿಯ ಕೈಚಿತ್ರವದು – ಮಂಕುತಿಮ್ಮ || ಕಗ್ಗ ೨೦ ||

 

ಸಮತೆಸಂಯಮಶಮಗಳಿಂ ಭವವನೋಲಗಿಸೆ |
ಸಮನಿಪುದು ಮತಿಯ ಹದವಾತ್ಮಾನುಭವಕೆ ||
ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ |
ಶ್ರಮಿಸಿಳೆಯ ಗಾಣದಲಿ – ಮಂಕುತಿಮ್ಮ || ಕಗ್ಗ ೨೧ ||

 

ರಾವಣನ ಹಳಿವವನೆ; ಜೀವವನೆ ಬಿಸುಡಿಸುವ |
ಲಾವಣ್ಯವೆಂತಹುದೊ? ನೋವದೆಂತಹುದೊ? ||
ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ |
ಗಾವಿಲನ ಗಳಹೇನು? – ಮಂಕುತಿಮ್ಮ || ಕಗ್ಗ ೨೨ ||

 

ಪಾರಿಜಾತವ ಕಂಡು ನಿಡುಸುಯ್ದು; ಪದಗಳಿಂ |
ಶೌರಿಕಥೆಯನು ಹೆಣೆದು ತೃಪ್ತನಹನು ಕವಿ ||
ಊರಿನುದ್ಯಾನಕದ ತರಿಸಿ ಬೆಳಸುವ ಕಾರ್ಯ- |
ಧೀರನಲ ರಾಜ್ಯಕನು – ಮಂಕುತಿಮ್ಮ || ಕಗ್ಗ ೨೩ ||

 

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? |
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ||
ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? |
ತಾಳುಮೆಯೆ ಪರಿಪಾಕ – ಮಂಕುತಿಮ್ಮ || ಕಗ್ಗ ೨೪ ||

 

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? |
ಕಸದೊಳಗೆ ಕಸವಾಗಿ ಹೋಹನಲೆ ನೀನು? ||
ಮುಸುಕಲೀ ಧರೆಯ ಮರೆವೆನ್ನನ್; ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ – ಮಂಕುತಿಮ್ಮ || ಕಗ್ಗ ೨೫ ||

 

ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ |
ಇಂದು ನಂಬಿಹುದೆ ಮುಂದೆಂದುಮೆಂದಲ್ಲ ||
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು |
ಇಂದಿಗೀ ಮತವುಚಿತ – ಮಂಕುತಿಮ್ಮ || ಕಗ್ಗ ೨೬ ||

 

ಒರ್ವನೆ ನಿಲುವೆ ನೀನುತ್ಕಟಕ್ಷನಗಳಲಿ |
ಧರ್ಮಸಂಕಟಗಳಲಿ; ಜೀವಸಮರದಲಿ ||
ನಿರ್ವಾಣದೀಕ್ಷೆಯಲಿ; ನಿರ್ಯಾಣಘಟ್ಟದಲಿ |
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ || ಕಗ್ಗ ೨೭ ||

 

ಪ್ರಾಕ್ತನದ ವಾಸನೆಯೆ ಮನಕೆ ಮೊದಲಿನ ಮಂತ್ರಿ |
ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ||
ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ |
ಗುಪ್ತದೊಳು ಕುಟಿಲವಿದು – ಮಂಕುತಿಮ್ಮ || ಕಗ್ಗ ೨೮ ||

 

ವ್ಯಸನಕಾರಣವೊಂದು ಹಸನಕಾರಣವೊಂದು |
ರಸಗಳೀಯೆರಡಕಿಂತಾಳವಿನ್ನೊಂದು ||
ಭೃಶವಿಶ್ವಜೀವಿತಗಭೀರತೆಯ ದರ್ಶನದ |
ರಸವದದ್ಭುತಮೌನ – ಮಂಕುತಿಮ್ಮ || ಕಗ್ಗ ೨೯ ||

 

ಪ್ರೀತಿಮಹಿಮೆಯ ಚಿತ್ರರೀತಿಯಂ ವಾಲ್ಮೀಕಿ |
ನೀತಿಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್ ||
ಗೀತೆಯಲಿ ವಿಶ್ವಜೀವನರಹಸ್ಯವನವರ್ |
ಖ್ಯಾತಿಸಿಹರದು ಕಾವ್ಯ – ಮಂಕುತಿಮ್ಮ || ಕಗ್ಗ ೩೦ ||

 

ಭೌತವಿಜ್ಞಾನಿ ರವಿತಾರೆಧರೆಗಳ ಚಲನ |
ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||
ಪ್ರೀತಿರೋಷಗಳನವನಳೆವನೇನ್? ಅವ್ಯಕ್ತ |
ಚೇತನವನರಿವನೇಂ? – ಮಂಕುತಿಮ್ಮ || ಕಗ್ಗ ೩೧ ||

 

ಆಶೆಗಳ ಕೆಣಕದಿರು; ಪಾಶಗಳ ಬಿಗಿಯದಿರು |
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಮೃತಿಯ ಚುಚ್ಚದಿರ್; ಎನ್ನು- |
ತೀಶನನು ಬೇಡುತಿರೊ – ಮಂಕುತಿಮ್ಮ || ಕಗ್ಗ ೩೨ ||

 

ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |
ಸಂದಿಹುದು ಚಿರನವತೆಯಶ್ವತ್ಥಮರಕೆ ||
ಎಂದೆಂದುಮಂತಿರುವುದೀ ವಿಶ್ವವೃಕ್ಷವದ |
ರೊಂದು ರೆಂಬೆಯೊ ನೀನು – ಮಂಕುತಿಮ್ಮ || ಕಗ್ಗ ೩೩ ||

 

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ||
ಶಿಶುವಾಗು ನೀಂ ಮನದಿ; ಹಸುವಾಗು; ಸಸಿಯಾಗು |
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ || ಕಗ್ಗ ೩೪ ||

 

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ || ಕಗ್ಗ ೩೫ ||

 

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |
ತೇಲುತ್ತೆ ಭಯವ ಕಾಣದೆ ಸಾಗುತಿರಲು ||
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ |
ಮೇಲ ಕೀಳಾಗಿಪುದು – ಮಂಕುತಿಮ್ಮ || ಕಗ್ಗ ೩೬ ||

 

ಮಂದಿರದ ಶಿಲ್ಪಿ ಯಂತ್ರಗಳ ಯೋಜಕ ರಾಜ್ಯ- |
ಸಂಧಾನಿ ವಿಜ್ಞಾನಿಯುದ್ಯೋಗದಾನಿ ||
ಮಂದಿಮುಂದಾಳು ಜನಬಾಂಧವ್ಯಪೋಷಕನು |
ಸೌಂದರ್ಯಕರರಿವರು – ಮಂಕುತಿಮ್ಮ || ಕಗ್ಗ ೩೭ ||

 

ಮುಂದೇನೊ; ಮತ್ತೇನೊ; ಇಂದಿಗಾ ಮಾತೇಕೆ? |
ಸಂದರ್ಭ ಬರಲಿ; ಬಂದಾಗಳಾ ಚಿಂತೆ ||
ಹೊಂದಿಸುವನಾರೊ; ನಿನ್ನಾಳಲ್ಲ; ಬೇರಿಹನು |
ಇಂದಿಗಿಂದಿನ ಬದುಕು – ಮಂಕುತಿಮ್ಮ || ಕಗ್ಗ ೩೮ ||

 

ಸೆರೆಬಿದ್ದು ಧರ್ಮಪಾದಪ ನಿಲದು ಮತಗಳಲಿ |
ಜರೆಯಿಂದ ಬರಡಹುದು ಮಠದ ನೆರಳಿನಲಿ ||
ಪರಸತ್ತ್ವರಸ ವಿಶ್ವಜೀವನದ ಬೇರ್ಗಳಿಂ |
ನೆರೆಯಲಾ ತರು ಸೊಂಪು – ಮಂಕುತಿಮ್ಮ || ಕಗ್ಗ ೩೯ ||

 

ಹೊಸಹೊಸಬನಾಗುವನನುಕ್ಷಣಂ ಮಾನವನು |
ವಸುಧೆಯಾ ಮೂಸೆಯಲಿ ಪುಟಪಾಕವಾಂತು ||
ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ |
ಕಸವೆಲ್ಲ ಕಳೆದವನು – ಮಂಕುತಿಮ್ಮ || ಕಗ್ಗ ೪೦ ||

 

ಆವ ಬೇಳೆಯದಾವ ನೀರಿನಲಿ ಬೇಯುವುದೊ! |
ಆವ ಜೀವದ ಪಾಕವಾವ ತಾಪದಿನೋ! ||
ಆ ವಿವರವನು ಕಾಣದಾಕ್ಷೇಪಣೆಯದೇನು? |
ದೈವಗುಟ್ಟದು ತಿಳಿಯೆ – ಮಂಕುತಿಮ್ಮ || ಕಗ್ಗ ೪೧ ||

 

ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ; ಮೊದಲು |
ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ||
ಬಾಳನೀ ಜಗದ ಮಂತುವು ಕಡೆಯಲೇಳುವುದು |
ಆಳದಿಂದಾತ್ಮಮತಿ – ಮಂಕುತಿಮ್ಮ || ಕಗ್ಗ ೪೨ ||

 

ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ |
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ||
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? |
ದಿಕ್ಕವರಿಗವರವರೆ – ಮಂಕುತಿಮ್ಮ || ಕಗ್ಗ ೪೩ ||

 

ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ |
ಹೊನಲು ನೂರೀ ಬಾಳ ಕಡಲನುಬ್ಬಿಸಲಿ ||
ತನುಬಂಧ ಕಳಚಿ; ಜೀವವಖಂಡಚೇತನದ |
ಕುಣಿತದಲಿ ಕೂಡಿರಲಿ – ಮಂಕುತಿಮ್ಮ || ಕಗ್ಗ ೪೪ ||

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ |
ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ |
ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ || ಕಗ್ಗ ೪೫ ||

 

ಜಾನಪದ ಶಿಷ್ಟಿಯಲಿ; ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ; ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು – ಮಂಕುತಿಮ್ಮ || ಕಗ್ಗ ೪೬ ||

 

ನರಜೀವನದ ರಣದಿ ವಿಧಿಯ ಬಲವೊಂದು ಕಡೆ |
ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ||
ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು |
ಪುರುಷತನವೇ ವಿಜಯ – ಮಂಕುತಿಮ್ಮ || ಕಗ್ಗ ೪೭ ||

 

ಸ್ಥೂಲ ಸೂಕ್ಷ್ಮವಿವೇಕರಹಿತೇಷ್ಟ ಬಂಧುಜನ |
ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ||
ಸಾಲವನು ನಿನ್ನಿಂದ ಸಲಿಸಿಕೊಳಬಂದವರು |
ತಾಳುಮೆಯಿನವರೊಳಿರು – ಮಂಕುತಿಮ್ಮ || ಕಗ್ಗ ೪೮ ||

 

ಬಾಳ ಹಳಿವುದದೇಕೆ? ಗೋಳ ಕರೆವುದದೇಕೆ? |
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ||
ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ |
ಪಾಲುಗೊಳಲಳಬೇಡ – ಮಂಕುತಿಮ್ಮ || ಕಗ್ಗ ೪೯ ||

 

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ |
ಹುಲ್ಲುಬಯಲೊಂದೆಡೆಯಿನೊಂದಕ್ಕೆ ನೆಗೆದು ||
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ- |
ಡೆಲ್ಲಿಯೋ ಸುಖ ನಿನಗೆ? – ಮಂಕುತಿಮ್ಮ || ಕಗ್ಗ ೫೦ ||

 

ಇಂದ್ರಿಯವ ಜಯಿಸಿದೆಯೊ? ಮಂದವೋ ನಿನ್ನಕ್ಷಿ? |
ಸೌಂದರ್ಯ ಯಕ್ಷಿಣಿಯೆ ನಿನ್ನ ತೊರೆದಿಹಳೋ? ||
ಅಂಧನೆ ವಿರಕ್ತನ್; ಅಪ್ಸರೆಯ ಕಾಣದನೆ ಯತಿ |
ಕಂಡು ಕೆರಳದನಾರೊ! – ಮಂಕುತಿಮ್ಮ || ಕಗ್ಗ ೫೧ ||

 

ಪುಣ್ಯಪಾಪದ ಮಿಶ್ರ ನರಜಂತುವವನ ನೆಲೆ |
ಮಣ್ಣು ಕರುಳುಗಳೆಸಕವವನ ಮೈದೊಡವು ||
ಬಣ್ಣಬಣ್ಣದ ವಸ್ತ್ರ; ಬಿಳ್ಪೊಡನೆ ಕಪ್ಪಿಹುದು |
ಕಣ್ಣ ದುರುಗುಟಿಸದಿರು – ಮಂಕುತಿಮ್ಮ || ಕಗ್ಗ ೫೨ ||

 

ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ |
ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ? ||
ಗಂಧಾನಿಲಂಗಳವು ಪರಸತ್ತ್ವಪುಷ್ಪದವು |
ಸಂದೇಹವೇನೆಲವೊ – ಮಂಕುತಿಮ್ಮ || ಕಗ್ಗ ೫೩ ||

 

ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |
ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ||
ಹಿಟ್ಟಿಗಗಲಿದ ಬಾಯಿ; ಬಟ್ಟೆಗೊಡ್ಡಿದ ಕೈಯಿ |
ಇಷ್ಟೆ ನಮ್ಮೆಲ್ಲ ಕಥೆ – ಮಂಕುತಿಮ್ಮ || ಕಗ್ಗ ೫೪ ||

 

ಬರೆವ ಹಲಗೆಯನೊಡೆದು ಬಾಲಕನು ತಾನದನು |
ಮರಳಿ ಜೋಡಿಪೆನೆನ್ನುತಾಯಾಸಗೊಳುತ ||
ಸರಿಚೌಕಗೈವಾಟದಲಿ ಜಗವ ಮರೆವಂತೆ |
ಪರಬೊಮ್ಮ ಸೃಷ್ಟಿಯಲಿ – ಮಂಕುತಿಮ್ಮ || ಕಗ್ಗ ೫೫ ||

 

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |
ನೆನೆಯದಿನ್ನೊಂದನೆಲ್ಲವ ನೀಡುತದರಾ ||
ಅನುಸಂಧಿಯಲಿ ಜೀವಭಾರವನು ಮರೆಯುವುದು |
ಹನುಮಂತನುಪದೇಶ – ಮಂಕುತಿಮ್ಮ || ಕಗ್ಗ ೫೬ ||

 

ಸರಕಾರ ಹರಿಗೋಲು; ತೆರೆಸುಳಿಗಳತ್ತಿತ್ತ |
ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು ||
ಬಿರುಗಾಳಿ ಬೀಸುವುದು; ಜನವೆದ್ದು ಕುಣಿಯುವುದು |
ಉರುಳದಿಹುದಚ್ಚರಿಯೊ! – ಮಂಕುತಿಮ್ಮ || ಕಗ್ಗ ೫೭ ||

 

ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- |
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||
ಇಷ್ಟವಾತನೊಳುದಿಸುವಂತೆ; ಚೋದಿಪುದೆಂತು? |
ಕಷ್ಟ ನಮಗಿಹುದಷ್ಟೆ – ಮಂಕುತಿಮ್ಮ || ಕಗ್ಗ ೫೮ ||

 

ಏನಾದೊಡೆಯುಮಪ್ಪುದುಂಟು; ಸಿದ್ಧನಿರದಕೆ |
ಭಾನು ತಣುವಾದನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು – ಮಂಕುತಿಮ್ಮ || ಕಗ್ಗ ೫೯ ||

 

ಬಹಿರಂತರಗಳೊಂದು ಭೂತಭವ್ಯಗಳೊಂದು |
ಇಹಪರಂಗಳುಮೊಂದು ಚೈತನ್ಯವೊಂದು ||
ಬಹುಪಾತ್ರನಾಟಕದಿ ಮಾಯೆ ಶತವೇಷಗಳ |
ವಹಿಸಲೀವಳು ಪತಿಗೆ – ಮಂಕುತಿಮ್ಮ || ಕಗ್ಗ ೬೦ ||

 

ಶುನಕ ಬೆಂಬತ್ತಿತಲ ಧರ್ಮಜನ ಕಡೆವರಂ |
ನಿನಗಂತು ಸಂಗಡಿಗನೊರ್ವನೆಡೆಬಿಡದನ್ ||
ಇಣಿಕಿ ನೋಡರದಾರುಮೆನ್ನುವೆಡೆ ಕಾದಿಹನು |
ಅಣಕಿಗ ಮನಸ್ಸಾಕ್ಷಿ – ಮಂಕುತಿಮ್ಮ || ಕಗ್ಗ ೬೧ ||

 

ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||
ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು |
ಚಿನ್ಮಯತೆಯಾತ್ಮಗುಣ – ಮಂಕುತಿಮ್ಮ || ಕಗ್ಗ ೬೨ ||

 

ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು |
ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||
ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? |
ಕಿತ್ತ ಗಾಳಿಯ ಪಟವೊ – ಮಂಕುತಿಮ್ಮ || ಕಗ್ಗ ೬೩ ||

 

ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ |
ಕಟುಕನಿನಿಸಕ್ಕಿಯನು ಹಕ್ಕಿಗೆರಚುವವೋಲ್ ||
ತುಟಿ ಸುಟ್ಟು ರಸನೆಗೆಟುಕದ ಕೀರು ದೈವಕೃಪೆ |
ತಟವಟವೊ ಸೃಷ್ಟಿದಯೆ – ಮಂಕುತಿಮ್ಮ || ಕಗ್ಗ ೬೪ ||

 

ಜೀವನದ ಪರಿಪೂರ್ಣದರ್ಶನವದೊಂದಿಹುದು |
ಭೂವ್ಯೋಮ ವಿಸ್ತರದ ಮಿತಿಯ ಮೀರ್ದುದದು ||
ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ |
ಭಾವಿಸಾ ಚಿತ್ರವನು – ಮಂಕುತಿಮ್ಮ || ಕಗ್ಗ ೬೫ ||

 

ಇನ್ನೇನು ಮತ್ತೇನು ಗತಿಯೆಂದು ಬೆದರದಿರು |
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |
ತಣ್ಣಗಿರಿಸಾತ್ಮವನು – ಮಂಕುತಿಮ್ಮ || ಕಗ್ಗ ೬೬ ||

 

ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |
ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||
ಗಗನದೊಳನಂತದರ್ಶನದೆ ಮುಕ್ತಿಯನೊಂದು |
ನಗುನಗಿಸಿ ಲೋಕವನು – ಮಂಕುತಿಮ್ಮ || ಕಗ್ಗ ೬೭ ||

 

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಸೆದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡುಕರದವೊಲು? – ಮಂಕುತಿಮ್ಮ || ಕಗ್ಗ ೬೮ ||

 

ತನ್ನ ಮನದಾಟಗಳ ತಾನೆ ನೋಡುತ ನಗುವ |
ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |
ಧನ್ಯತೆಯ ಕಂಡವನು – ಮಂಕುತಿಮ್ಮ || ಕಗ್ಗ ೬೯ ||

 

ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |
ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||

ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |
ಸತ್ರ ಹೊಸದಿಹುದು ನಡೆ – ಮಂಕುತಿಮ್ಮ || ಕಗ್ಗ ೭೦ ||

ಕೃತ್ರಿಮವೊ ಜಗವೆಲ್ಲ | ಸತ್ಯತೆಯದೆಲ್ಲಿಹುದೊ? |
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ||
ಚತ್ರವೀ ಜಗವಿದರೊಳಾರ ಗುಣವೆಂತಹುದೊ! |
ಯಾತ್ರಿಕನೆ; ಜಾಗರಿರೊ – ಮಂಕುತಿಮ್ಮ || ಕಗ್ಗ ೭೧ ||

 

ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? |
ಹೊಂದಿರುವರವರ್ ಅಹಂತೆಯು ಮೊಳೆಯುವನಕ ||
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ? |
ಬಂಧ ಮುರಿವುದು ಬಳಿಕ – ಮಂಕುತಿಮ್ಮ || ಕಗ್ಗ ೭೨ ||

 

ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! |
ಆವಾಗಳಾವಕಡೆಗೆರಗುವುದೊ ಹಕ್ಕಿ! ||
ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |
ಜೀವಮಾರ್ಗವನೂಹ್ಯ – ಮಂಕುತಿಮ್ಮ || ಕಗ್ಗ ೭೩ ||

 

ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ |
ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ||
ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ |
ಮೋಕ್ಷ ಸ್ವತಸ್ಸಿದ್ಧ – ಮಂಕುತಿಮ್ಮ || ಕಗ್ಗ ೭೪ ||

 

ನಾನೆಂಬುದೊಂದಂಶವಿತರ ಜಗವೊಂದಂಶ |
ನಾನು ನೀನುಗಳಳಿದ ಸರ್ವೈಕ್ಯವೊಂದು ||
ಧ್ಯಾನಿಸುತ್ತೈಕ್ಯವನು ಪಾಲಿಸುವುದುಭಯವನು |
ಜಾಣಿನಾ ನಾಟಕವೊ – ಮಂಕುತಿಮ್ಮ || ಕಗ್ಗ ೭೫ ||

 

ಸತತಮಾರ್ಗಣೆ; ಸಿದ್ಧಿಯಂತಿರಲಿ; ಮಾರ್ಗಣೆಯೆ |
ಗತಿ ಮನುಜಲೋಕಕ್ಕೆ; ಜಗದ ಜೀವವದು ||
ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ |
ಕಥೆ ಮುಗಿವುದಲ ಜಗಕೆ? – ಮಂಕುತಿಮ್ಮ || ಕಗ್ಗ ೭೬ ||

 

ಧರ್ಮವೆಂಬುದದೇನು? ಕರ್ಮವೆಂಬುದದೇನು? ||
ಬ್ರಹ್ಮಾಂಡಕಥೆಯೇನು? ಜೀವಿತವಿದೇನು? |
ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ |
ಬ್ರಹ್ಮವೇ ಜೀವನವೊ – ಮಂಕುತಿಮ್ಮ || ಕಗ್ಗ ೭೭ ||

 

ಏಸು ಸಲ ತಪವಗೈದೇಸು ಬನ್ನವನಾಂತು |
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ||
ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ |
ಲೇಸಾಗಿಸಾತ್ಮವನು – ಮಂಕುತಿಮ್ಮ || ಕಗ್ಗ ೭೮ ||

 

ದಿನದಿನವು ಹಳಸುವುವು; ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ – ಮಂಕುತಿಮ್ಮ || ಕಗ್ಗ ೭೯ ||

 

ಮಿತಿಯನರಿತಾಶೆ; ಸಮುಚಿತವ ಮರೆಯದ ಯತ್ನ |
ತೈತಿಕ್ಷೆ ಕಷ್ಟಾಂಶದಪರಿಹಾರ್ಯತೆಗೆ ||
ಮೃತಿಯೆ ಜೀವನಕಥೆಯ ಕೊನೆಯಲ್ಲವೆಂಬರಿವು |
ಹಿತಗಳಿವು ನರಕುಲಕೆ – ಮಂಕುತಿಮ್ಮ || ಕಗ್ಗ ೮೦ ||

 

ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ |
ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ||
ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ |
ಸರಿ ಲೋಕಬಾಂಧವ್ಯ – ಮಂಕುತಿಮ್ಮ || ಕಗ್ಗ ೮೧ ||

 

ಭೌತವಿಜ್ಞಾನ ವಿವರಗಳಿನೇನಾತ್ಮಂಗೆ? |
ಪ್ರೇತಪ್ರಯಾಣಕಥೆಯೆಂತಿರ್ದೊಡೇನು? ||
ಜಾತಿ ನೀತಿ ಸಮಾಜ ವರ್ಗಭೇದದಿನೇನು? |
ಘಾತಿಯಿಲ್ಲಾತ್ಮಂಗೆ – ಮಂಕುತಿಮ್ಮ || ಕಗ್ಗ ೮೨ ||

 

ಬೀಳುವುದ ನಿಲ್ಲಿಪುದು; ಬಿದ್ದುದನು ಕಟ್ಟುವುದು |
ಹಾಲೊಡೆಯೆ ಕಡೆದದನು ತಕ್ರವಾಗಿಪುದು ||
ಹಾಳ ಹಾಳಾಗಿಪುದು; ಹಳದ ಹೊಸತಾಗಿಪುದು |
ಬಾಳಿಗಿದೆ ಚಿರಧರ್ಮ – ಮಂಕುತಿಮ್ಮ || ಕಗ್ಗ ೮೩ ||

 

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು |
ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |
ಯಿಪ್ಪತ್ತು ಸೇರೆ ರುಚಿ – ಮಂಕುತಿಮ್ಮ || ಕಗ್ಗ ೮೪ ||

 

ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು? |
ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ||
ಸೃಷ್ಟಿಕೋಟೆಯಲಿ ನೀನೊಂದಿಟಿಕೆ; ಸೊಟ್ಟಾಗೆ |
ಪೆಟ್ಟು ತಿನ್ನುವೆ ಜೋಕೆ – ಮಂಕುತಿಮ್ಮ || ಕಗ್ಗ ೮೫ ||

 

ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |
ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ||
ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ |
ಲೋಲನಾಗಿರ್ಪನೆಲೊ – ಮಂಕುತಿಮ್ಮ || ಕಗ್ಗ ೮೬ ||

 

ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- |
ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ||
ಕೆರಳಿಪುದು ಕರಣಗಳ; ಮರಳಿಪುದು ಹರಣಗಳ |
ಹೊರಮೋಹವೊಳದಾಹ – ಮಂಕುತಿಮ್ಮ || ಕಗ್ಗ ೮೭ ||

 

ಜಗದ ಸಂತಾಪ ಸಂತಸ ಸಂಭ್ರಮಂಗಳುಲಿ |
ಬಗಿದು ನರನೆದೆಯ; ಜೀವವ ಪಿಡಿದು ಕುಲುಕೆ ||
ಸೊಗಯಿಪುದು ಮನಸಿಗದು ಕವಿಕಲಾರಸಿಕರ್ಗೆ |
ಜಗ ಸೂರ್ಯಂ ನೀಂ ಕಮಲ – ಮಂಕುತಿಮ್ಮ || ಕಗ್ಗ ೮೮ ||

 

ಬಾಂದಳದ ಬಾಗು; ರವಿಕಿರಣಗಳ ನೀಳ್ಕೋಲು |
ಇಂದುಮಣಿನುಣ್ಪು; ತಾರೆಗಳ ಕಣ್ಮಿನುಗು ||
ಚೆಂದದಂಗಾಂಗಭಾವದಿ ಮೊದಲ ಪಾಠವಿವು |
ಸೌಂದರ್ಯಗುರು ಪ್ರಕೃತಿ – ಮಂಕುತಿಮ್ಮ || ಕಗ್ಗ ೮೯ ||

 

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು |
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ||
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು |
ಮುಗುಳು ದುಡಿತಕೆ ತಣಿಸು – ಮಂಕುತಿಮ್ಮ || ಕಗ್ಗ ೯೦ ||

 

ಅದರಿಂದ ನೀತಿ ನಯವದರಿಂದ ಕುಲಗೋತ್ರ |

ವದರಿಂದ ರಾಜ್ಯ ಮಠ ಧರ್ಮ ಸಂಸ್ಥೆಗಳು ||
ಒದವುವದರಿಂದೆ ಮಮತಾನಾಶದವಕಾಶ- |
ವದರಿನಾತ್ಮವಿಕಾಸ – ಮಂಕುತಿಮ್ಮ || ಕಗ್ಗ ೯೧ ||

 

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? |
ಚಂಡಚತುರೋಪಾಯದಿಂದಲೇನಹುದು? ||
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು |
ಅಂಡಲೆತವಿದಕೇನೊ? – ಮಂಕುತಿಮ್ಮ || ಕಗ್ಗ ೯೨ ||

 

ಕಾಯಕವ ಚರಿಸುತ್ತ; ಮಾನಸವ ಸಯ್ತಿಡುತ |

ಆಯಸಂಬಡಿಸದವೊಲಂತರಾತ್ಮನನು ||
ಮಾಯೆಯೊಡನಾಡುತ್ತ; ಬೊಮ್ಮನನು ಭಜಿಸುತ್ತ |
ಆಯುವನು ಸಾಗಿಸೆಲೊ – ಮಂಕುತಿಮ್ಮ || ಕಗ್ಗ ೯೩ ||

 

ಬ್ರಹ್ಮವೇ ಸತ್ಯ; ಸೃಷ್ಟಿಯೆ ಮಿಥ್ಯೆಯೆನ್ನುವೊಡೆ |
ಸಂಬಂಧವಿಲ್ಲವೇನಾ ವಿಷಯಯುಗಕೆ? ||
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ |
ನೆಮ್ಮುವುದದಾರನೋ? – ಮಂಕುತಿಮ್ಮ || ಕಗ್ಗ ೯೪ ||

 

ಮೇರುಪರ್ವತಕಿಹುವು ನೂರೆಂಟು ಶಿಖರಗಳು |
ದಾರಿ ನೂರಿರಬಹುದು; ನಿಲುವ ಕಡೆ ನೂರು ||
ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |
ಮೇರುಸಂಸ್ಕೃತಿಯೆ ಬಲ – ಮಂಕುತಿಮ್ಮ || ಕಗ್ಗ ೯೫ ||

 

ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! |
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ||
ಬಿಡುವಿರದು ಬಣಗು ಚಿಂತೆಗೆ; ಬುತ್ತಿ ಹಂಗಿರದು |
ಕಡಿದಲ್ಲವರ್ಗೆ ಬಾಳ್ – ಮಂಕುತಿಮ್ಮ || ಕಗ್ಗ ೯೬ ||

 

ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ |
ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ||
ಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ |
ನಡೆವುದದು ಜೀವಿವೊಲು – ಮಂಕುತಿಮ್ಮ || ಕಗ್ಗ ೯೭ ||

 

ವಿಷಯಭೋಗವಿರಕ್ತಿ; ವಿಶ್ವಲೀಲಾಸಕ್ತಿ |
ಕೃಷಿಗೆ ಸಂತತ ದೀಕ್ಷೆ; ವಿಫಲಕೆ ತಿತಿಕ್ಷೆ ||
ವಿಷಮದಲಿ ಸಮದೃಷ್ಟಿ; ವಿವಿಧಾತ್ಮ ಸಂಸೃಷ್ಟಿ |
ಕುಶಲಸಾಧನಗಳಿವು – ಮಂಕುತಿಮ್ಮ || ಕಗ್ಗ ೯೮ ||

 

ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ |
ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ||
ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ |
ಪರಬೊಮ್ಮನೆನ್ನುವರು – ಮಂಕುತಿಮ್ಮ || ಕಗ್ಗ ೯೯ ||

 

ಮುಕ್ಕೋಟಿ ದೇವತೆಗಳಾಳುತಿಹ ಲೋಕದಲಿ |
ದಿಕ್ಕುಗಾಣದೆ ಜೀವಿಯಲೆವುದಚ್ಚರಿಯೇಂ? ||
ಒಕ್ಕಟ್ಟನೊಡೆಯರೇ ಕಲಿಯದಿರೆ ನಮ್ಮ ಗತಿ- |
ಗಿಕ್ಕಟ್ಟು ತಪ್ಪುವುದೆ? – ಮಂಕುತಿಮ್ಮ || ಕಗ್ಗ ೧೦೦ ||

ಸಾಮಾನ್ಯರೂಪದಲಿ; ಸಂಸಾರಿವೇಷದಲಿ |
ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ ||
ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು |
ತಾಮಸಿಗೆ ವರವೆಲ್ಲಿ? – ಮಂಕುತಿಮ್ಮ || ಕಗ್ಗ ೧೦೧ ||

 

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ |
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ||
ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ |
ವಣುವಣುವೆ ಬಿಗಿಯುವುವೊ – ಮಂಕುತಿಮ್ಮ || ಕಗ್ಗ ೧೦೨ ||

 

ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ |
ವಲಯವಲಯಗಳಾಗಿ ಸಾರುವುದು ದಡಕೆ ||
ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು |
ಕಲೆತುಕೊಳ್ಳಲಿ ಜಗದಿ – ಮಂಕುತಿಮ್ಮ || ಕಗ್ಗ ೧೦೩ ||

 

ಎಷ್ಟು ಬಗೆ ಯಂತ್ರಗಳೊಳೆಷ್ಟು ರಸಮಿಶ್ರದಿಂ |
ದೆಷ್ಟಾದಿಭೂತಗಳು ಪರಿಪಾಕವೊಂದಿ ||
ಒಟ್ಟು ಸೇರಿಹವು ನರನೆಂಬ ಸಿದ್ಧಿಯೊಳವನು |
ಸೃಷ್ಟಿಶೈಲದ ಶಿಖರ – ಮಂಕುತಿಮ್ಮ || ಕಗ್ಗ ೧೦೪ ||

 

ತೊಲಗೆಲವೊ ಮನೆಯಿಂದ ಮನವು ಬರಡಾದಂದೆ |
ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ||
ತೊಲಗು ಜಗದಿಂ ದೂರ; ಇಳೆಗಾಗದಿರು ಭಾರ |
ತೊಲಗಿ ನೀಂ ಮರೆಯಾಗು – ಮಂಕುತಿಮ್ಮ || ಕಗ್ಗ ೧೦೫ ||

 

ಎಡವದೆಯೆ; ಮೈಗಾಯವಡೆಯದೆಯೆ; ಮಗುವಾರು |
ನಡೆಯ ಕಲಿತವನು? ಮತಿನೀತಿಗತಿಯಂತು ||
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- |
ದಡವಿಕೊಳುವವರೆಲ್ಲ – ಮಂಕುತಿಮ್ಮ || ಕಗ್ಗ ೧೦೬ ||

 

ಭಾವರಾಗೋದ್ರೇಕ ತಾನೆ ತಪ್ಪೇನಲ್ಲ |
ಧೀವಿವೇಕದ ಸಮತೆಯದರಿನದಿರದಿರೆ ||
ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ |
ಪಾವನವೊ ಹೃನ್ಮಥನ – ಮಂಕುತಿಮ್ಮ || ಕಗ್ಗ ೧೦೭ ||

 

ವಿಶದಮಾದೊಂದು ಜೀವನಧರ್ಮದರ್ಶನವ- |
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದನೀ ಕಗ್ಗವನ – ಮಂಕುತಿಮ್ಮ || ಕಗ್ಗ ೧೦೮ ||

 

ಹೇಮಕುಂಭದಿ ಕೊಳಚೆರೊಚ್ಚುನೀರ್ಗಳ ತುಂಬಿ |
ರಾಮಣೀಯಕದೊಳಿಟ್ಟಾಮಗಂಧವನು ||
ಪ್ರೇಮಪುಷ್ಪಕೆ ಮೊನಚು ಗರಗಸವನಂಚಿರಿಸಿ |
ಏಂ ಮಾಡಿದನೊ ಬೊಮ್ಮ! – ಮಂಕುತಿಮ್ಮ || ಕಗ್ಗ ೧೦೯ ||

 

ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ |
ತಿರುಗಿಸಲು ತನ್ನ ದೃಷ್ಟಿಯನು ನಿರ್ಮಲದಿಂ ||
ನಿರತಿಶಯ ಸುಖವಲ್ಲಿ; ವಿಶ್ವಾತ್ಮವೀಕ್ಷೆಯಲಿ |
ಪರಸತ್ತ್ವಶಾಂತಿಯಲಿ – ಮಂಕುತಿಮ್ಮ || ಕಗ್ಗ ೧೧೦ ||

 

ಇಂದ್ರಿಯಗಳೊಳು ಬಾಳಿ ಜೀವ ಪಕ್ವಂಗೊಳ್ಳ- |
ಲಿಂದ್ರಿಯಂಗಳ ಮೀರಿ ಮೇಲೇರಿ ಜಾಣಿಂ- ||
ದಿಂದ್ರಿಯಂಗಳನಾಳಿ ಲೋಕವಂ ಸಂತಯಿಪ |
ಬಂಧು ಜೀವನ್ಮುಕ್ತ – ಮಂಕುತಿಮ್ಮ || ಕಗ್ಗ ೧೧೧ ||

 

ತನುವ ತಣಿಸುವ ತುತ್ತು ಮನಕೆ ನಂಜಾದೀತು |
ಮನಮೋಹ ಜೀವಕ್ಕೆ ಗಾಳವಾದೀತು ||
ಅನುಭವದ ಪರಿಣಾಮವೊಂದರಿಂದೊಂದಕ್ಕೆ |
ಗಣಿಸಾತ್ಮಲಾಭವನು – ಮಂಕುತಿಮ್ಮ || ಕಗ್ಗ ೧೧೨ ||

 

ಸೆಳೆಯುತಿರುವುದದೊಂದು ಹೊರಬೆಡಗಿನೆಳೆಗಳೆ |
ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||
ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿವಿಧಿ |
ಯೊಳತಂತ್ರವೋ? ನೋಡು – ಮಂಕುತಿಮ್ಮ || ಕಗ್ಗ ೧೧೩ ||

 

ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? |
ಆಂತರಗಭೀರಗಳ ತಾನೆ ಕಂಡವನಾರ್? ||
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ |
ಸ್ವಂತಕೇ ದುರ್ದರ್ಶ – ಮಂಕುತಿಮ್ಮ || ಕಗ್ಗ ೧೧೪ ||

 

ತಲೆಯಿಂದ ತಲೆಗೆ; ಪೀಳಿಗೆಯಿಂದ ಪೀಳಿಗೆಗೆ |
ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ ||
ಇಳಿಯುತಿದೆ ಯುಗದಿಂದ ಯುಗಕೆ ಮಾನವಧರ್ಮ |
ನಿಲದಮೃತಧಾರೆಯದು – ಮಂಕುತಿಮ್ಮ || ಕಗ್ಗ ೧೧೫ ||

 

ಆಳವನು ನೋಡಿ ಬಗೆದಾಡುವಾ ಮಾತಿಂಗೆ |
ರೂಢಿಯರ್ಥವದೊಂದು ಗೂಢಾರ್ಥವೊಂದು ||
ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು |
ಕೋಲು ಹುಟ್ಟೊಂದು ಬಲ – ಮಂಕುತಿಮ್ಮ || ಕಗ್ಗ ೧೧೬ ||

 

ಮೃತನ ಸಂಸಾರಕಥೆ ಶವವಾಹಕರಿಗೇಕೆ? |
ಸತಿಯು ಗೋಳಿಡಲಿ; ಸಾಲಿಗನು ಬೊಬ್ಬಿಡಲಿ ||
ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |
ಧೃತಿಯ ತಳೆ ನೀನಂತು – ಮಂಕುತಿಮ್ಮ || ಕಗ್ಗ ೧೧೭ ||

 

ತನಗಿಂತ ಹಿರಿದ; ಭುವನಕ್ಕಿಂತ ಹಿರಿದೊಂದ- |
ನನುಭವದ ಹಿಂದೆ; ಸೃಷ್ಟಿಯ ನೆರಳ ಹಿಂದೆ ||
ಅನುಮಿತಿಸಿ ಮನುಜನಾ ಹಿರಿದನೆಳಸುವನೆಯ್ದೆ |
– ಮಂಕುತಿಮ್ಮ || ಕಗ್ಗ ೧೧೮ ||

 

ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ |
ಮನದಿ ತೆರೆಗಳ ಕುಲುಕಿ ಕಡೆಯುವುದುಮೊಳಿತು ||
ಘನ ವರ್ಷ ಬಿರುಗಾಳಿ ಬಡಿಯಲಿರುಳೊಳ್ ನೆಲನ |
ದಿನದ ಸೊಗಸಿಮ್ಮಡಿಯೊ – ಮಂಕುತಿಮ್ಮ || ಕಗ್ಗ ೧೧೯ ||

 

ನಯದಿಂದ ಸೋಕು; ನೀಂ ದಯೆಯಿಂದ ನೋಡದನು |
ಭಯದಿನೋಲಗಿಸು; ನೀಂ ಪೂಜೆಗೈಯದನು ||
ಸ್ವಯಮಂಕುರಿತ ಸಕಲ ವಿಶ್ವಸತ್ತ್ವವೊ; ಜೀವ |
ಪ್ರಿಯತಮವೊ ಸೃಷ್ಟಿಯಲಿ – ಮಂಕುತಿಮ್ಮ || ಕಗ್ಗ ೧೨೦ ||

 

ಅಡಿಜಾರಿ ಬೀಳುವುದು; ತಡವಿಕೊಂಡೇಳುವುದು |
ಕಡುಬ ನುಂಗುವುದು; ಕಹಿಮದ್ದ ಕುಡಿಯುವುದು ||
ದುಡುಕಿ ಮತಿದಪ್ಪುವುದು; ತಪ್ಪನೊಪ್ಪೆನ್ನುವುದು |
ಬದುಕೆಂಬುದಿದು ತಾನೆ? – ಮಂಕುತಿಮ್ಮ || ಕಗ್ಗ ೧೨೧ ||

 

ಕ್ಷಮೆ ದೋಷಿಗಳಲಿ; ಕೆಚ್ಚೆದೆ ವಿಧಿಯ ಬಿರುಬಿನಲಿ |
ಸಮತೆ ನಿರ್ಮತ್ಸರತೆ ಸೋಲ್ಗೆಲವುಗಳಲಿ ||
ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು |
ಭ್ರಮೆಯೊ ಮಿಕ್ಕೆಲ್ಲ ತಪ – ಮಂಕುತಿಮ್ಮ || ಕಗ್ಗ ೧೨೨ ||

 

ಲೋಕಜೀವನದೆ ಮಾನಸದ ಪರಿಪಾಕವಾ |
ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ ||
ಸಾಕಲ್ಯದಾತ್ಮ ಸಂದರ್ಶನಕೆ ಕರಣವದು |
ಲೋಕದಿಂ ನಿರ್ಲೋಕ – ಮಂಕುತಿಮ್ಮ || ಕಗ್ಗ ೧೨೩ ||

 

ಋಣವ ತೀರಿಸಬೇಕು; ಋಣವ ತೀರಿಸಬೇಕು |
ಋಣವ ತೀರಿಸುತ ಜಗದಾದಿಸತ್ತ್ವವನು ||
ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು |
ಮನೆಯೊಳಗೆ ಮಠ ನಿನಗೆ – ಮಂಕುತಿಮ್ಮ || ಕಗ್ಗ ೧೨೪ ||

 

ಪೌರುಷಾಶ್ವಕ್ಕಾಶೆ ಛಾಟಿ; ಭಯ ಕಡಿವಾಣ |
ಹಾರಾಟವದರದಾ ವೇಧೆಗಳ ನಡುವೆ ||
ಧೀರನೇರಿರೆ; ಹೊಡೆತ ಕಡಿತವಿಲ್ಲದೆ ಗುರಿಗೆ |
ಸಾರುವುದು ನೈಜದಿಂ – ಮಂಕುತಿಮ್ಮ || ಕಗ್ಗ ೧೨೫ ||

 

ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು |
ಊರನದು ಕೊಚ್ಚುವುದು ಬದಿಯ ಕಟ್ಟದಿರೆ ||
ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ |
ಪೌರುಷದ ನದಿಯಂತು – ಮಂಕುತಿಮ್ಮ || ಕಗ್ಗ ೧೨೬ ||

 

ಎದ್ದೆದ್ದು ಬೀಳುತಿಹೆ; ಗುದ್ದಾಡಿ ಸೋಲುತಿಹೆ |
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ||
ಉದ್ಧರಿಸುವೆನು ಜಗವನೆನ್ನುತಿಹ ಸಖನೆ; ನಿ- |
ನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ || ಕಗ್ಗ ೧೨೭ ||

 

ವಿಸ್ತಾರದಲಿ ಬಾಳು; ವೈಶಾಲ್ಯದಿಂ ಬಾಳು |
ಕತ್ತಲೆಯ ಮೊಡಕು ಮೂಲೆಗಳ ಸೇರದಿರು ||
ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ |
ಮೃತ್ಯು ನಿನಗಲ್ಪತೆಯೊ – ಮಂಕುತಿಮ್ಮ || ಕಗ್ಗ ೧೨೮ ||

 

ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ |
ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ ||
ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ |
ಮೇಲೇನು? ಬೀಳೇನು? – ಮಂಕುತಿಮ್ಮ || ಕಗ್ಗ ೧೨೯ ||

 

ಎಂದೊ ನಿನಗೊಂದುದಿನ ಮೂಗು ಮುರಿಯುವುದು ದಿಟ |
ವೃಂದಾರಕರು ಮತ್ಸರಿಸರೆ ಗರ್ವಿತರ? ||
ಸಂದರ್ಭಗಳನದಕೆ ಜೋಡಿಪನು ವಿಧಿರಾಯ |
ಅಂದಿಕೊಳ್ಳನೆ ನಿನ್ನ? – ಮಂಕುತಿಮ್ಮ || ಕಗ್ಗ ೧೩೦ ||

 

ನಭದ ಬಲಯೊಳನಂತ; ಮನದ ಗುಹೆಯೊಳನಂತ |
ವುಭಯದಾ ನಡುವೆ ಸಾದ್ಯಂತ ಜೀವಕಥೆ ||
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು |
ಹಬೆಗುಳ್ಳೆಯೋ ಸೃಷ್ಟಿ – ಮಂಕುತಿಮ್ಮ || ಕಗ್ಗ ೧೩೧ ||

 

ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ |
ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ||
ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು |
ಧನ್ಯನುಭಯವ ಮೀರೆ – ಮಂಕುತಿಮ್ಮ || ಕಗ್ಗ ೧೩೨ ||

 

ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ |
ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ||
ಕ್ಷಣಮಾತ್ರ ಮಾನುಮದು ಕಣ್ಣೀರ ಬರಿಸುವುದು |
ಗಣಿಸಬೇಡದನು ನೀಂ – ಮಂಕುತಿಮ್ಮ || ಕಗ್ಗ ೧೩೩ ||

 

ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು |
ಭೂವಿಷಯದಿಂದ ರಸ ಮಾರ್ಪಡುವುದುಂಟು ||
ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ |
ಸೇವಕನು ನೀನಲ್ತೆ? – ಮಂಕುತಿಮ್ಮ || ಕಗ್ಗ ೧೩೪ ||

 

ಮಾಯೆಯೇ ಸರಸಿ; ನಿರ್ಗುಣ ಸತ್ತ್ವದಿಂದೇನು? |
ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ? ||
ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು |
ತಾಯವಳು ನೀಂ ಮಗುವು – ಮಂಕುತಿಮ್ಮ || ಕಗ್ಗ ೧೩೫ ||

 

ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು |
ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ||
ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ |
ನೆಮ್ಮಲಿನ್ನೇನಿಹುದೊ? – ಮಂಕುತಿಮ್ಮ || ಕಗ್ಗ ೧೩೬ ||

 

ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ |
ಲೋಕತಾಪದಿ ಬೆಂದು ತಣಿಪನೆಳಸಿದವಂ ||
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು |
ಸ್ವೀಕರಿಕೆ ಬೇಳ್ವವರು – ಮಂಕುತಿಮ್ಮ || ಕಗ್ಗ ೧೩೭ ||

 

ಸಾರಸುಖರಸನಿಧಿ ಪರಬ್ರಹ್ಮನಿರುತಿರಲ್ |
ಸ್ವಾರಸ್ಯಹೀನವೆನ್ನುವರೆ ಜೀವಿತವ? ||
ಪೌರುಷ ಪ್ರೇಮ ಸೌಂದರ್ಯಗಳುಮಂತೆಯೇ |
ಸ್ವಾರಸ್ಯವೊ ರಹಸ್ಯ – ಮಂಕುತಿಮ್ಮ || ಕಗ್ಗ ೧೩೮ ||

 

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು |
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಜಸವು ಜನಜೀವನಕೆ – ಮಂಕುತಿಮ್ಮ || ಕಗ್ಗ ೧೩೯ ||

 

ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ |
ಆಯವದರಿಂ ಭಟನ ಸತ್ತ್ವಶಿಕ್ಷಣಕೆ ||
ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ |
ಶ್ರೇಯಸಿಗೆ ಸೋಪಾನ – ಮಂಕುತಿಮ್ಮ || ಕಗ್ಗ ೧೪೦ ||

 

ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ? |

ಸ್ವಕೃತಿಯೆಂದವನೆನ್ನುವುದವಳಿರದೊಡಿರದು ||
ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ |
ವಿಕೃತಿಗೆಡೆಯಾಗದಿರೊ – ಮಂಕುತಿಮ್ಮ || ಕಗ್ಗ ೧೪೧ ||

 

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ |

ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು? |
ಉದಕಬುದ್ಬುದವೆಲ್ಲ! – ಮಂಕುತಿಮ್ಮ || ಕಗ್ಗ ೧೪೨ ||

 

ಸ್ವಾತಿ ಮಳೆಹನಿ ಬೀಳ್ವ; ಶುಕ್ತಿ ಬಾಯ್ದೆರೆದೇಳ್ವ |
ಕೌತುಕದ ಸಮಯಯೋಗದೆ ಮೌಕ್ತಿಕ ಫಲ ||
ಪ್ರೀತಿ ಸುಖ ಸತ್ಯದರ್ಶನ ಶಾಂತಿಗಳ ಹುಟ್ಟುಮ್ |
ಆ ತೆರದ ಯೋಗದಿನೆ – ಮಂಕುತಿಮ್ಮ || ಕಗ್ಗ ೧೪೩ ||

 

ಧಾತ್ರಿಯನು ಮದುವೆಮಂಟಪದೊಲು ಸಿಂಗರಿಸಿ |
ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ||
ಕೃತ್ರಿಮವನೆಡೆಬಿಡದೆ ನಡಸಿ ನಗುವ ವಿಲಾಸಿ |
ಚಿತ್ರಕಾರಿಯೊ ಮಾಯೆ – ಮಂಕುತಿಮ್ಮ || ಕಗ್ಗ ೧೪೪ ||

 

ಮೌನದಿಂದಂಬಲಿಯನುಂಡು ತಣಿಯುವ ಮಾನಿ |
ಶ್ವಾನನುಣುವೆಂಜಲೋಗರಕೆ ಕರುಬುವನೆ? ||
ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ |
ಮಾಣು ನೀಂ ತಲ್ಲಣವ – ಮಂಕುತಿಮ್ಮ || ಕಗ್ಗ ೧೪೫ ||

 

ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು |
ಚೆಂದಳಿರು ದಿನದಿನಮುಮೊಗೆಯೆ ನೀರೆರೆದು ||
ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ |
ನಿಂದಿರುವುದಲೆ ಧರ್ಮ – ಮಂಕುತಿಮ್ಮ || ಕಗ್ಗ ೧೪೬ ||

 

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ |
ಇಂದು ಮೃಷ್ಟಾನ್ನಸುಖ; ನಾಳೆ ಭಿಕ್ಷಾನ್ನ ||
ಇಂದು ಬರಿಯುಪವಾಸ; ನಾಳೆ ಪಾರಣೆಯಿಂತು |
ಸಂದಿರುವುದನ್ನಋಣ – ಮಂಕುತಿಮ್ಮ || ಕಗ್ಗ ೧೪೭ ||

 

ತಲೆಪಾಗಿನೊಳಕೊಳಕ; ಪಂಚೆನಿರಿಯೊಳಹರಕ |
ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ||
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ- |
ನಿಳೆಗೆ ಹರಡುವುದೇಕೊ? – ಮಂಕುತಿಮ್ಮ || ಕಗ್ಗ ೧೪೮ ||

 

ಗುಹೆಯೆಡಕೆ; ಗುಹೆ ಬಲಕೆ; ನಡುವೆ ಮಲೆ; ಕಣಿವೆಯಲಿ |
ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ||
ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- |
ರ್ವಹಿಸುವುದೆ ಜಾಣ್ಮೆಯಲ – ಮಂಕುತಿಮ್ಮ || ಕಗ್ಗ ೧೪೯ ||

 

ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು |
ತೇಲುವುದಮೇಯಸತ್ತ್ವದಲಿ ಮೇಯ ಜಗ ||
ಮೂಲದಶೆಯೊಳಗೊಂದು; ಮಾಪನದ ಬಗೆಗೆರಡು |
ಗಾಳಿಯುಸಿರುಗಳಂತೆ – ಮಂಕುತಿಮ್ಮ || ಕಗ್ಗ ೧೫೦ ||

 

ನೀರಧಿ ಬ್ರಹ್ಮ; ನೀರ್ಗಲ್ ಜೀವವೆನುತೊಂದು |
ಕ್ಷೀರವದು; ಘೃತವಿದದರೊಳಗೆನ್ನುತೊಂದು ||
ಕೀರು ಪರಮಾನ್ನವದು; ದ್ರಾಕ್ಷಿಯಿದೆನುತ್ತೊಂದು |
ಮೂರಿಂತು ಮತವಿವರ – ಮಂಕುತಿಮ್ಮ || ಕಗ್ಗ ೧೫೧ ||

 

ಹುದುಗಿಹುದದೆಲ್ಲಿ ಪರಮಾತ್ಮನೀ ತನುವಿನಲಿ? |
ಹೃದಯದೊಳೊ ಮೆದುಳಿನೊಳೊ ಹುಬ್ಬಿನಿರುಕಿನೊಳೋ? ||
ಇದನೆನಿತೊ ತರ್ಕಿಸಿಹರ್; ಎನ್ನೆಣಿಕೆಯನು ಕೇಳು |
ಉದರವಾತ್ಮನಿವಾಸ – ಮಂಕುತಿಮ್ಮ || ಕಗ್ಗ ೧೫೨ ||

 

ಎತ್ತಲೋ ಕಾಡುಮಬ್ಬಿನ ಬಳ್ಳಿ ಮೊಗ್ಗಿನಲಿ |
ಚಿತ್ರರಚನೆಗದೇಕೆ ತೊಡಗುವಳ್ ಪ್ರಕೃತಿ? ||
ಕೃತ್ಯಕ್ಕೆ ತಾಂ ತರುವ ಶಕ್ತಿಗುಣಪೂರ್ಣತೆಯೆ |
ಸಾರ್ಥಕವೊ ಜೀವಿತಕೆ – ಮಂಕುತಿಮ್ಮ || ಕಗ್ಗ ೧೫೩ ||

 

ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು |
ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ ||
ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ |
ಅತಿಚರಿತೆ ಪ್ರಕೃತಿಯಲಿ – ಮಂಕುತಿಮ್ಮ || ಕಗ್ಗ ೧೫೪ ||

 

ಅರುಣೋದಯಪ್ರಭೆಯ; ಗಿರಿಶೃಂಗದುನ್ನತಿಯ |
ವರುಣಾಲಯಾಯತಿಯ ನಿರುಕಿಸಿದೊಡಹುದೇಂ? ||
ಬೆರಗು; ಬರಿಬೆರಗು; ನುಡಿಗರಿದೆನಿಪ್ಪಾನಂದ |
ಪರಮಪೂಜೆಯುಮಂತು – ಮಂಕುತಿಮ್ಮ || ಕಗ್ಗ ೧೫೫ ||

 

ಅವರೆಷ್ಟು ಧನವಂತರ್; ಇವರೆಷ್ಟು ಬಲವಂತರ್ |
ಅವರೆಷ್ಟು ಯಶವಂತರ್ ಎನುವ ಕರುಬಿನಲಿ ||
ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು |
ಶಿವನಿಗೆ ಕೃತಜ್ಞತೆಯೆ? – ಮಂಕುತಿಮ್ಮ || ಕಗ್ಗ ೧೫೬ ||

 

ಅಂಬುಧಿಯ ಮಡಕೆಯಲಿ; ಹೊಂಬಿಸಿಲ ಕಿಟಿಕಿಯಲಿ |
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ||
ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ- |
ಯಿಂಬು ಕಿಂಚಿನ್ಮತಿಗೆ – ಮಂಕುತಿಮ್ಮ || ಕಗ್ಗ ೧೫೭ ||

 

ಸಾರ್ವಭೌಮತೆ ನಾಲ್ಕು ಗುಣಕೆ ಗುಣರಾಜ್ಯದಲಿ |
ಧೈರ್ಯ ಮೊದಲಿನದೆರಡನೆಯದು ಮತಿಯೋಜೆ ||
ಸರ್ವದಯೆ ಮೂರನೆಯದದುವೆ ನೀತಿಯ ಮೂಲ |
ನಿರ್ಮಮತ್ವವೆ ಮುಕುಟ – ಮಂಕುತಿಮ್ಮ || ಕಗ್ಗ ೧೫೮ ||

 

ಒಂದಗಳು ಹೆಚ್ಚಿರದು; ಒಂದಗಳು ಕೊರೆಯಿರದು |
ತಿಂದು ನಿನ್ನನ್ನಋಣ ತೀರುತಲೆ ಪಯಣ ||
ಹಿಂದಾಗದೊಂದು ಚಣ; ಮುಂದಕುಂ ಕಾದಿರದು |
ಸಂದ ಲೆಕ್ಕವದೆಲ್ಲ – ಮಂಕುತಿಮ್ಮ || ಕಗ್ಗ ೧೫೯ ||

 

ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ |
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ||
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? |
ಕ್ಲಿಷ್ಟದ ಸಮಸ್ಯೆಯದು – ಮಂಕುತಿಮ್ಮ || ಕಗ್ಗ ೧೬೦ ||

 

ರಾವಣನ ದಶಶಿರವದೇಂ? ನರನು ಶತಶಿರನು |

ಸಾವಿರಾಸ್ಯಗಳನೊಂದರೊಳಣಗಿಸಿಹನು ||
ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ |
ಭೂವ್ಯೋಮಕತಿಶಯನು – ಮಂಕುತಿಮ್ಮ || ಕಗ್ಗ ೧೬೧ ||

 

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ || ಕಗ್ಗ ೧೬೨ ||

 

ಜೀವಗತಿಗೊಂದು ರೇಖಾಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? |
ಆವುದೀ ಜಗಕಾದಿ? – ಮಂಕುತಿಮ್ಮ || ಕಗ್ಗ ೧೬೩ ||

 

ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ |
ಹೊರಗೆ ಕಾರ್ಯಧ್ಯಾನವೊಳಗುದಾಸೀನ ||
ಹೊರಗೆ ಸಂಸೃತಿಭಾರವೊಳಗದರ ತಾತ್ಸಾರ |
ವರಯೋಗಮಾರ್ಗವಿದು – ಮಂಕುತಿಮ್ಮ || ಕಗ್ಗ ೧೬೪ ||

 

ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ |
ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ||
ಇನಿತನಿತು ದಿಟಗಳಿವು—ತುಂಬುದಿಟದಂಶಗಳು |
ಗಣನೀಯವವು ಬಾಳ್ಗೆ – ಮಂಕುತಿಮ್ಮ || ಕಗ್ಗ ೧೬೫ ||

 

ದೇವನೇನತಿಶಯಿತಮಾನಿಸನೆ ಭೋಗಕ್ಕೆ? |
ಹೂವುಣಿಸು ಮುಡುಪೊಡವೆಯವನಿಗಂ ಬೇಕೆ? ||
ಆವುದೊಳ್ಳಿತೊ ತನಗೆ ನರನದನು ಪರಮಂಗೆ |
ನೈವೇದಿಪುದು ಸಾಜ – ಮಂಕುತಿಮ್ಮ || ಕಗ್ಗ ೧೬೬ ||

 

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ? |
ಓಲೆಗಳನವರವರಿಗೈದಿಸಿರೆ ಸಾಕು ||
ಸಾಲಗಳೊ; ಶೂಲಗಳೊ; ನೋವುಗಳೊ; ನಗುವುಗಳೊ! |
ಕಾಲೋಟವವನೂಟ – ಮಂಕುತಿಮ್ಮ || ಕಗ್ಗ ೧೬೭ ||

 

ಶೀತಾಳೆ ಸಿಡುಬು ಶಿಶುಗಳ ಕುಲುಕಿ ತೆರಳುವುದು |
ಪ್ರೀತಿ ಕಾಮನೆಗಳಷ್ಟಿಷ್ಟು ಬೆಳೆದವರ ||
ಯಾತನೆಗಳಿಂ ಕುದಿಸಿ ಕುಲುಕಿ ಬಳಿಕಾರುವುವು |
ಕಾತರತೆ ಕಳೆಯೆ ಸುಖ – ಮಂಕುತಿಮ್ಮ || ಕಗ್ಗ ೧೬೮ ||

 

ಅದು ಬೇಕು ಇದು ಬೇಕು ಮತ್ತೊಂದು ಬೇಕೆಂದು |
ಬೆದಕುತಿರುವುದು ಲೋಕ ಸೊಗದಿರವನೆಳಸಿ ||
ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ |
ಮುದಗಳಮಿತದ ನಿಧಿಗೆ – ಮಂಕುತಿಮ್ಮ || ಕಗ್ಗ ೧೬೯ ||

 

ನರಕ ತಪ್ಪಿತು ಧರ್ಮಜಂಗೆ; ದಿಟ; ಆದೊಡೇಂ? |
ನರಕದರ್ಶನದುಃಖ ತಪ್ಪದಾಯಿತಲ? ||
ದುರಿತತರುವಾರು ನೆಟ್ಟುದೊ; ನಿನಗಮುಂಟು ಫಲ |
ಚಿರಋಣದ ಲೆಕ್ಕವದು – ಮಂಕುತಿಮ್ಮ || ಕಗ್ಗ ೧೭೦ ||

 

ಎಣಿಕೆಯೊಳಿತಾದೊಡೆಯುಮೊಳಿತನಾಗಿಸದು ಹಟ |
ಮಣಿಕನಕ ಸಂಕೋಲೆ ತನುವ ಬಂಧಿಸದೇಂ? ||
ತನಯನಿರಿದಸಿ ನಿನ್ನ ಮೈಯ ಹುಣ್ಣಾಗಿಸದೆ? |
ಮನ ಸರ್ವಸಮವಿರಲಿ – ಮಂಕುತಿಮ್ಮ || ಕಗ್ಗ ೧೭೧ ||

 

ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು |
ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ ||
ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ |
ಬೊಂಕುದೀವಿಗೆ ತಂಟೆ – ಮಂಕುತಿಮ್ಮ || ಕಗ್ಗ ೧೭೨ ||

 

ಇಂದ್ರಿಯಾತೀತವನು ಪಿಡಿಯಲಿಂದ್ರಿಯಕಳವೆ? |
ಇಂದ್ರಧನು ಕೈದೋಟಿ ಕೊಂಕಿಗೆಟಕುವುದೆ? ||
ಸಂದೃಶ್ಯವಾತ್ಮವಾತ್ಮಕೆ ಬೇರೆ ಕರಣದಿಂ |
ತಂದ್ರಿ ಬಿಡೆ ದೊರೆವುದದು – ಮಂಕುತಿಮ್ಮ || ಕಗ್ಗ ೧೭೩ ||

 

ಕನಲ್ದ ಹುಲಿ ಕೆರಳ್ದ ಹರಿ ಮುಳ್ಕರಡಿ ಛಲನಾಗ |
ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ ||
ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ |
ವಣಗಿಹುವು ನರಮನದಿ – ಮಂಕುತಿಮ್ಮ || ಕಗ್ಗ ೧೭೪ ||

 

ಸರಿಗೆಪಂಚೆಯೊ ಹೊದಕೆ; ಹರಕುಚಿಂದಿಯೊ ಮೈಗೆ |
ಪರಮಾನ್ನಭೋಜನವೊ; ತಿರುಪೆಯಂಬಲಿಯೋ ||
ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ |
ಕರುಬು ಕೊರಗೇತಕೆಲೊ? – ಮಂಕುತಿಮ್ಮ || ಕಗ್ಗ ೧೭೫ ||

 

ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ |
ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ||
ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು |
ಮುಟ್ಟದಿಳೆಯಸಿ ನಿನ್ನ – ಮಂಕುತಿಮ್ಮ || ಕಗ್ಗ ೧೭೬ ||

 

ಬಾಳ ಸಿರಿ ಸೊಗಸುಗಳ ಪೆರ್ಚಿಪನು ಖೇಲಕನು |
ಕೀಳದೆನಿಪವನೊರಟ; ಮಂಕ; ಕಲ್ಲೆದೆಗ ||
ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದಿರವ |
ಮೇಲೆನಿಪವನೆ ರಸಿಕ – ಮಂಕುತಿಮ್ಮ || ಕಗ್ಗ ೧೭೭ ||

 

ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? |
ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ||
ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು |
ಬೆನ್ನಿನಲಿ ಹೊತ್ತು ನಡೆ – ಮಂಕುತಿಮ್ಮ || ಕಗ್ಗ ೧೭೮ ||

 

ಕವಿ ಚಿತ್ರಕೋವಿದನು ಪರತತ್ತ್ವಶೋಧಕನು |
ವಿವಿಧ ವಾದನ ಗೀತ ನೃತ್ಯ ಕುಶಲಿಗಳು ||
ನವನವತೆಯಂ ಮನಸಿಗೀವೆಲ್ಲ ಕಲೆಗಾರ- |
ರವರಿಂದ ಸುಂದರತೆ – ಮಂಕುತಿಮ್ಮ || ಕಗ್ಗ ೧೭೯ ||

 

ತನ್ನಯ ಮನೋರಥಂಗಳ ಚಕ್ರವೇಗದಿನೆ |
ತನ್ನ ಮಣಿಹಾರಗಳ ಸಿಕ್ಕು ಬಿಗಿತದಿನೇ ||
ತನ್ನ ಸಂಕಲ್ಪ ವಿಪರೀತದಿನೆ ಮಾನವನ |
ಬೆನ್ನು ಮುರಿದೀತೇನೊ! – ಮಂಕುತಿಮ್ಮ || ಕಗ್ಗ ೧೮೦ ||

 

ಒಡರಿಸುವನೆಲ್ಲವನ್; ಅದಾವುದುಂ ತನದಲ್ಲ |
ಬಿಡನೊಂದನುಂ ರಾಜ್ಯ ತನದಲ್ಲವೆಂದು ||
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ |
ಕಡುಯೋಗಿ ಭರತನಲ? – ಮಂಕುತಿಮ್ಮ || ಕಗ್ಗ ೧೮೧ ||

 

ನಾಸಿಕದೊಳುಚ್ಛ್ವಾಸ ನಿಶ್ವಾಸ ನಡೆವಂತೆ |
ಸೂಸುತ್ತಲಿರಲಿ ನಿನ್ನಿರವು ಮಂಗಳವ ||
ಆಶಿಸೆದೆ ಸಂಕಲ್ಪಯತ್ನಗಳನಿನಿತುಮಂ |
ಸಾಜವಾಗಲಿ ಸಯ್ಪು – ಮಂಕುತಿಮ್ಮ || ಕಗ್ಗ ೧೮೨ ||

 

ರಣದಿ ಬಿದ್ದಾ ಸೈನ್ಯಪತಿ ಸಿಡ್ನಿಯುತ್ಕ್ರಮಣ- |
ದೊಣಗುಬಾಯಿಗೆ ನೀರನೊಡ್ಡಲ್ ಅದನವನು ||
ತನಗಿಂತ ಕೆಲದ ಭಟಗದು ಸಲ್ವುದೆಂದಿತ್ತು |
ತಣಿವನಾಂತುದ ನೆನೆಯೊ – ಮಂಕುತಿಮ್ಮ || ಕಗ್ಗ ೧೮೩ ||

 

ಜಗ ಬೆಳೆದು ಚಿಗುರುತಿರೆ ಶಾಸ್ತ್ರ ಕರಟಿರಲಹುದೆ? |
ನಿಗಮಸಂತತಿಗೆ ಸಂತತಿಯಾಗದಿಹುದೆ? ||
ಬಗೆಬಗೆಯ ಜೀವಸತ್ತ್ವವಿಕಾಸವಾಗುತಿರ- |
ಲೊಗೆವುದೈ ವಿಜ್ಞಾನ – ಮಂಕುತಿಮ್ಮ || ಕಗ್ಗ ೧೮೪ ||

 

ಪರಕಿಹವೆ ಸೋಪಾನವೆಂದು ನೀನೊಪ್ಪುವೊಡೆ |
ಪರಕಿಂತಲಿಹವೆಂತು ಜೊಳ್ಳದಾದೀತು? ||
ಹೊರಲೆಬೇಕಂತಾದೊಡಿಹದ ಹೊರೆಗಳನೆಲ್ಲ |
ಜರೆವುದೇಕಿನ್ನದನು? – ಮಂಕುತಿಮ್ಮ || ಕಗ್ಗ ೧೮೫ ||

 

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು |
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ||
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು |
ಬಗೆಯಲರಿತವನೆ ಸುಖಿ – ಮಂಕುತಿಮ್ಮ || ಕಗ್ಗ ೧೮೬ ||

 

ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ |
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ||
ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ |
ಬಲ ತೀವಿ ಚಲಿಪುದದು – ಮಂಕುತಿಮ್ಮ || ಕಗ್ಗ ೧೮೭ ||

 

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ? |
ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ? ||
ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ? |
ಮೃಷೆಯೊ ಮೈಬೆಡಗೆಲ್ಲ – ಮಂಕುತಿಮ್ಮ || ಕಗ್ಗ ೧೮೮ ||

 

ಆಗುಂಬೆಯಸ್ತಮಯ ದ್ರೋಣಪರ್ವತದುದಯ |
ತ್ಯಾಗರಾಜನ ಗಾನ ವಾಲ್ಮೀಕಿ ಕವನ ||
ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ |
ಯೋಗಪುಲಕಾಂಕುರವ? – ಮಂಕುತಿಮ್ಮ || ಕಗ್ಗ ೧೮೯ ||

 

ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |
ಬೇಡಲೊಳಿತಾವುದೆಂಬುದರರಿವುಮಿಲ್ಲ ||
ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ |
ನೀಡುಗೆದೆಗಟ್ಟಿಯನು – ಮಂಕುತಿಮ್ಮ || ಕಗ್ಗ ೧೯೦ ||

 

ರಾಯ ಮುದಿದಶರಥನನಾಡಿಸುತ ಕೈಕೇಯಿ |
ಸ್ವೀಯ ವಶದಲಿ ಕೋಸಲವನಾಳಿದಂತೆ ||
ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ |
ಕಾಯುವಳು ತನ್ನಿಚ್ಛೆ – ಮಂಕುತಿಮ್ಮ || ಕಗ್ಗ ೧೯೧ ||

 

ಒಂದು ಕಣ್ಣಳುವಂದು ಮತ್ತೊಂದು ತಳ್ಕೈಸಿ |
ಅಂದ ಚೆಂದಗಳ ಜನವರಸುವುದು ಬಾಳೊಳ್ ||
ಬಂಧುಮೋಹವೊ ಯಶವೊ ವೈರವೊ ವೈಭವವೊ |
ಬಂಧಿಪುದು ಜಗಕವರ – ಮಂಕುತಿಮ್ಮ || ಕಗ್ಗ ೧೯೨ ||

 

ಕಿಡಿ ಸಣ್ಣದನು ಮೇಲೆ ಬಿದ್ದ ಕೊರಡಾರಿಪುದು |
ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳ ||
ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗೆಲಸಗಳನು |
ತೊಡಗಾತ್ಮ ಬಲಿತಂದು – ಮಂಕುತಿಮ್ಮ || ಕಗ್ಗ ೧೯೩ ||

 

ಜೀವಋಣಗಳ ಲೆಕ್ಕದಾದಿಯರಿಯದ ನಾವು |
ಆವುದನು ಸರಿಯೆನುವ? ತಪ್ಪಾವುದೆನುವ? ||
ಓವೊ ಬಿಡು ಕಡುಕಷ್ಟ ನೀತಿನಿರ್ಣಯದ ಹೊರೆ |
ದೈವವದ ಹೊರಲಿ ಬಿಡು – ಮಂಕುತಿಮ್ಮ || ಕಗ್ಗ ೧೯೪ ||

 

ಪುಲಿ ಸಿಂಗದುಚ್ಛ್ವಾಸ; ಹಸು ಹುಲ್ಲೆ ಹಯದುಸಿರು |
ಹುಳು ಹಾವಿಲಿಯ ಸುಯ್ಲು; ಹಕ್ಕಿ ಹದ್ದುಯ್ಲು ||
ಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿ |
ಕಲಬೆರಕೆ ಜಗದುಸಿರು – ಮಂಕುತಿಮ್ಮ || ಕಗ್ಗ ೧೯೫ ||

 

ಹೃದಯಪುಷ್ಪಮರಂದವಾತ್ಮಕೆ ನಿಜಾನಂದ |
ಉದಿಪುದಾ ರಸ ಸುಂದರದ ಕಿರಣ ಸೋಕೆ ||
ಬದುಕಿನೊಳ್ ಕವಿತೆಯೊಳ್ ಕಲೆಗಳೊಳ್ ಪ್ರಕೃತಿಯೊಳ್ |
ಪುದಿದಿರ್ಪ ಕಾಂತಿಯದು – ಮಂಕುತಿಮ್ಮ || ಕಗ್ಗ ೧೯೬ ||

 

ಐಕ್ಯ ನಾನಾತ್ವಗಳು; ನಿಯತಿ ಸ್ವತಂತ್ರಗಳು |
ತರ್ಕ್ಯ ನಿಸ್ತರ್ಕ್ಯಗಳು ಬೆರೆತು ಚಿತ್ರದಲಿ ||
ಶಕ್ಯಮುಂ ಪುರುಷತಂತ್ರಕ್ಕಶಕ್ಯಮುಮಾದ |
ಸಿಕ್ಕುಗಳ ಕಂತೆ ಜಗ – ಮಂಕುತಿಮ್ಮ || ಕಗ್ಗ ೧೯೭ ||

 

ಮುಗ್ಧನಾಗದೆ ಭುಜಿಸು ಭುಜಿಸಲಿಹುದನು ಜಗದಿ |
ಮಾಧ್ವೀಕ ಭಯವಿರದು ಜಾಗರೂಕನಿಗೆ ||
ದೃಗ್ದೃಶ್ಯಚಿತ್ರಪ್ರಪಂಚದಲಿ ಸೇರಿ ನೀಂ |
ಮುಗ್ಧನಾಗದೆ ಸುಖಿಸು – ಮಂಕುತಿಮ್ಮ || ಕಗ್ಗ ೧೯೮ ||

 

ನಂಬು ದೇವರ; ನಂಬು; ನಂಬೆನ್ನುವುದು ಲೋಕ |
ಕಂಬನಿಯನಿಡುವ ಜನ ನಂಬಲೊಲ್ಲದರೇಂ? ||
ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? |
ತುಂಬು ವಿರತಿಯ ಮನದಿ – ಮಂಕುತಿಮ್ಮ || ಕಗ್ಗ ೧೯೯ ||

 

ಸನ್ನಿಹಿತ ಮನುಜನಲಿ ದೈವಪಾಶವವೆರಡು |
ಪುಣ್ಯ ಪಾಪದ ಮಿಶ್ರವವನ ಸ್ವಭಾವ ||
ಕಣ್ಣೊಮ್ಮೆಯಾಗಸದ ಬೆಳಕಿನೊಡನಾಡುವುದು |
ಮಣ್ಣೊಳುರುಳುವುದೊಮ್ಮೆ – ಮಂಕುತಿಮ್ಮ || ಕಗ್ಗ ೨೦೦ ||

ಅತ್ಯಂತದುತ್ಕಟದ ಸನ್ನಿವೇಶಗಳ ಭರ |
ಪ್ರತ್ಯಕ್ಷದರ್ಶನದಿನಲ್ಲದೆಂತಹುದು? ||
ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ |
ವಿಸ್ತಾರದದ್ಭುತವ? – ಮಂಕುತಿಮ್ಮ || ಕಗ್ಗ ೨೦೧ ||

ಎಲ್ಲರಿಗಮಾಗಿ ತಾನ್; ಎಲ್ಲರುಂ ತನಗಾಗಿ |
ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ ||
ಸಲ್ಲುವುಪಕರಣಗಳು ಮನೆ ರಾಜ್ಯ ಸಂಸಾರ- |
ವಲ್ಲಗಳೆಯದಿರವನು – ಮಂಕುತಿಮ್ಮ || ಕಗ್ಗ ೨೦೨ ||

 

ಧರಣಿಗೋಳವು ಮೂಸೆ; ಜೀವಗಳನದರೊಳಗೆ |
ಪರಿಶುದ್ಧಿಗೊಳಿಸುವುದು ಸಂಸಾರತಾಪ ||
ಪರಿಪರಿಯ ಬಂಧುಧರ್ಮದಿನ್ ಅಹಂಮತಿ ಕರಗೆ |
ಹರಡಿ ಹಬ್ಬುವುದಾತ್ಮ – ಮಂಕುತಿಮ್ಮ || ಕಗ್ಗ ೨೦೩ ||

 

ಶೂನ್ಯವೆಲ್ಲವುಮೆಂಬೊಡಂತೆನಿಸುವುದದೇನು? |
ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ? ||
ಚಿನ್ಮಯವನದನೆ ನೀಂ ಸತ್ಯವೆಂದಾಶ್ರಯಿಸು |
ಶೂನ್ಯವಾದವೆ ಶೂನ್ಯ – ಮಂಕುತಿಮ್ಮ || ಕಗ್ಗ ೨೦೪ ||

 

ಇರುವನ್ನಮೀ ಬಾಳು ದಿಟವದರ ವಿವರಣೆಯ |
ಹೊರೆ ನಮ್ಮ ಮೇಲಿಲ್ಲ ನಾದವರ ಸಿರಿಯ ||
ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದೆ |
ಪುರುಷಾರ್ಥಸಾಧನೆಯೊ – ಮಂಕುತಿಮ್ಮ || ಕಗ್ಗ ೨೦೫ ||

 

ಒಂದು ಕಡೆ ಚಿಗುರುತಲಿ; ಒಂದು ಕಡೆ ಬಾಡುತಲಿ |
ಕಂದುತಿರೆ ಕೊಂಬೆ; ಮುಂಡದಲಿ ಹಬ್ಬುತಲಿ ||
ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ |
ಸ್ಪಂದನವೊ ಬ್ರಹ್ಮನದು – ಮಂಕುತಿಮ್ಮ || ಕಗ್ಗ ೨೦೬ ||

 

ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ |
ಮೂಲಮಂ ಕಂಡಂಗೆ ಸಂಭ್ರಾಂತಿಯೇನು? ||
ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ |
ಲೀಲಾಪ್ರಿಯಂ ಬ್ರಹ್ಮ – ಮಂಕುತಿಮ್ಮ || ಕಗ್ಗ ೨೦೭ ||

 

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು |
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ? ||
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |

ಗಟ್ಟಿತನ ಗರಡಿ ಫಲ – ಮಂಕುತಿಮ್ಮ || ಕಗ್ಗ ೨೦೮ ||

 

ಅಪ್ಪಾಲೆ ತಿಪ್ಪಾಲೆ ತಿರುಗಿಬಿದ್ದವನೊಬ್ಬ |
ಸ್ವಪ್ನಲೋಕದಿ ತಿರೆಯ ಮರೆತಾತನೊಬ್ಬ ||
ತಪ್ಪುಸರಿಗಳ ತೂಕವಳೆಯೆ ಕುಳಿತವನೊಬ್ಬ |
ಬೆಪ್ಪನಾರ್ ಮೂವರಲಿ? – ಮಂಕುತಿಮ್ಮ || ಕಗ್ಗ ೨೦೯ ||

 

ವಕ್ತ್ರವುಂಟೆಲ್ಲರಿಗೆ; ವರ್ಚಸೋರೊರ್ವರಿಗೆ |
ಕತ್ತಿ ಪಣ್ಯದೊಳುಂಟು; ಶಕ್ತಿ ಸಹಜದಲಿ ||
ವ್ಯಕ್ತಿಪ್ರಭಾವವೀ ಲೋಕಚರಿತೆಯ ಕೀಲು |
ಹಸ್ತವದು ದೈವಕೆಲೊ – ಮಂಕುತಿಮ್ಮ || ಕಗ್ಗ ೨೧೦ ||

 

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ |
ಜಗಕೆ ಕಾಣಿಪುದೊಂದು; ಮನೆಯ ಜನಕೊಂದು ||
ಸೊಗಸಿನೆಳಸಿಕೆಗೊಂದು; ತನ್ನಾತ್ಮಕಿನ್ನೊಂದು |
ಬಗೆಯೆಷ್ಟೊ ಮೊಗವಷ್ಟು – ಮಂಕುತಿಮ್ಮ || ಕಗ್ಗ ೨೧೧ ||

 

ಕಲ್ಲಾಗಿ ನಿಲ್ಲುವನು; ಬಳ್ಳಿವೊಲು ಬಳುಕುವನು |
ಮುಳ್ಳಾಗಿ ಚುಚ್ಚುವನು; ಫುಲ್ಲ ಸುಮವಹನು ||
ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು |

ಕ್ಷುಲ್ಲಮಾನಿಸನಿವನು – ಮಂಕುತಿಮ್ಮ || ಕಗ್ಗ ೨೧೨ ||

 

ಏನು ಪ್ರಪಂಚವಿದು! ಏನು ಧಾಳಾಧಾಳಿ! |
ಏನದ್ಭುತಾಪಾರಶಕ್ತಿನಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ? – ಮಂಕುತಿಮ್ಮ || ಕಗ್ಗ ೨೧೩ ||

 

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು? |
ಕ್ರಿಮಿಗೆ ಹಸಿವುಂಟಿನಿತು ಬೆದಕಾಟಮುಂಟು ||
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ |
ಕ್ರಿಮಿಪಂಕ್ತಿ ಕಿರಿದಹುದೆ? – ಮಂಕುತಿಮ್ಮ || ಕಗ್ಗ ೨೧೪ ||

 

ಅಜ್ಞಾತವಾದುದನಭಾವವೆನೆ ನಾಸ್ತಿಕನು |
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ ||
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ |
ಸ್ವಜ್ಞಪ್ತಿಶೋಧಿ ಮುನಿ – ಮಂಕುತಿಮ್ಮ || ಕಗ್ಗ ೨೧೫ ||

 

ಬಿಳಲಲ್ಲಿ; ಬೇರಲ್ಲ; ಮುಂಡಕಾಂಡಗಳಲ್ಲ |
ತಳಿರಲ್ಲ; ಮಲರಲ್ಲ; ಕಾಯಿಹಣ್ಣಲ್ಲ ||
ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ |
ತಿಳಿದದನು ನೆರವಾಗು – ಮಂಕುತಿಮ್ಮ || ಕಗ್ಗ ೨೧೬ ||

 

ಕುದಿ ಹೆಚ್ಚೆ ವೆಗಟ ಹುದು; ಕಡಮೆಯಿರೆ ಹಸಿನಾತ |
ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ||
ಅದರವೊಲೆ ಮನದ ಹದ; ಅದನೆಚ್ಚರದಿ ನೋಡು |
ಬದುಕು ಸೊಗ ಹದದಿಂದ – ಮಂಕುತಿಮ್ಮ || ಕಗ್ಗ ೨೧೭ ||

 

ಯಮನಿಗೇಕಪಕೀರ್ತಿ? ನರರು ಬಲು ಕರುಣಿಗಳೆ? |
ಮಮತೆಯಿನೊ ರೋಷದಿನೊ ಹಾಸ್ಯದಿನೊ ಹೇಗೋ ||

ನಿಮಿಷನಿಮಿಷಮುಮೊರ್ವನಿನ್ನೊರ್ವನನು ತಿಕ್ಕಿ |
ಸಮೆಯಿಸುವನಾಯುವನು – ಮಂಕುತಿಮ್ಮ || ಕಗ್ಗ ೨೧೮ ||

 

ಅಳೆವರಾರ್ ಪೆಣ್ಗಂಡುಗಳನೆಳೆವ ನೂಲುಗಳ? |
ಕೆಳೆಪಗೆಗಳೆಲ್ಲವಾಳದಲಿ ಬಲು ತೊಡಕು ||
ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ |
ತಿಳಿಯಗೊಡನದ ನಮಗೆ – ಮಂಕುತಿಮ್ಮ || ಕಗ್ಗ ೨೧೯ ||

ನೆನೆನೆನೆದು ಗಹನವನು; ಜೀವನರಹಸ್ಯವನು |
ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ||
ಮನನದೇಕಾಂತದಲಿ ಮೌನದ ಧ್ಯಾನದಲಿ |
ಮಣಿಮಣಿದು ಕೈಮುಗಿಯೊ – ಮಂಕುತಿಮ್ಮ || ಕಗ್ಗ ೨೨೦ ||

 

ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ |
ವಿಶ್ವಕೇಂದ್ರವು ನೀನೆ; ನೀನೆಣಿಸಿದೆಡೆಯೆ ||
ನಿಃಶ್ವಸಿತ ಸಂಬಂಧ ನಿನಗಂ ದಿಗಂತಕಂ |
ಪುಷ್ಪವಾಗಿರು ನೀನು – ಮಂಕುತಿಮ್ಮ || ಕಗ್ಗ ೨೨೧ ||

 

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ |
ಜನರೆಲ್ಲರಾಗುಡಿಯ ಕೆಲಸದಾಳುಗಳು ||
ಮನೆಯೇನು? ನಾಡೇನು? ಕುಲವೇನು? ಮಠವೇನು? |
ಎಣಿಸೆಲ್ಲವದೆಯೆಂದು – ಮಂಕುತಿಮ್ಮ || ಕಗ್ಗ ೨೨೨ ||

 

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |
ಅವನ ವೇಷಗಳೇಕೆ ಮಾರ್ಪಡುತಲಿಹವು? ||
ತವಕಪಡನೇತಕೋ ಕುರುಹ ತೋರಲು ನಮಗೆ |
ಅವಿತುಕೊಂಡಿಹುದೇಕೊ? – ಮಂಕುತಿಮ್ಮ || ಕಗ್ಗ ೨೨೩ ||

 

ಮೃತ್ಯು ತಾಂ ಬಂದು ಮೋಹಿನಿಯ ರೂಪದಿ ನಿನ್ನ |
ಚಿತ್ತವನು ಸೆರೆವಿಡಿದು ನೆತ್ತರನು ಬಸಿದು ||
ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ |
ಹತ್ಯೆಯಲಿ ಹರುಷಿಪಳೊ – ಮಂಕುತಿಮ್ಮ || ಕಗ್ಗ ೨೨೪ ||

 

ಅರಸನೊಬ್ಬನಲ್ಲ; ಮೂವರು ಬಾಳನಾಳುವರು |
ನರ ಕರುಮ ದೈವಗಳು; ತೊಡಕದಕೆ ಸಾಜ ||
ಗುರಿಯಿಡದ; ಮೊದಲು ಕೊನೆಯಿರದ; ದರಬಾರಿನಲಿ |
ಸರಿಯೇನೊ ತಪ್ಪೇನೊ? – ಮಂಕುತಿಮ್ಮ || ಕಗ್ಗ ೨೨೫ ||

 

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- |
ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ||
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |
ಬಲ್ಲವನೆ ಮುಕ್ತನಲ – ಮಂಕುತಿಮ್ಮ || ಕಗ್ಗ ೨೨೬ ||

 

ಜ್ಞೇಯದ ದ್ವೀಪಕಜ್ಞೇಯಾಬ್ಧಿಯಾವರಣ |
ಕಾಯಕದ ಗಿರಿಗೆ ಮಾನಸದಭ್ರಪಟಲ ||
ಮೇಯವನು ಬಗೆದೇನಮೇಯ ಸುತ್ತಲುಮಿರಲು? |
ಮಾಯೆಯೀ ಮಿಶ್ರಣವೊ – ಮಂಕುತಿಮ್ಮ || ಕಗ್ಗ ೨೨೭ ||

 

ದಾರಿಗುರಿಗಳ ಗೊತ್ತು ಕಗೆಗುಂಟೇನಯ್ಯಾ? |
ಆರ ಮನೆ ಸಂಡಿಗೆಯೊ; ಚುಂಡಿಲಿಯೊ; ಹುಳುವೋ ||
ಆರ ಪಿಂಡವೊ; ಏನೊ; ಎಂತೊ; ಆ ಬಾಳ ಗತಿ! |
ಮೀರಿದವನೇಂ ನೀನು? – ಮಂಕುತಿಮ್ಮ || ಕಗ್ಗ ೨೨೮ ||

 

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ |
ಮಹಿಮೆಯಿಂ ಜಗವಾಗಿ ಜೀವವೇಷದಲಿ ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ |
ಗಹನ ತತ್ತ್ವಕೆ ಶರಣೊ – ಮಂಕುತಿಮ್ಮ || ಕಗ್ಗ ೨೨೯ ||

 

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? |
ಬಗೆದು ಬಿಡಿಸುವರಾರು ಸೋಜಿಗವನಿದನು? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು |
ಬಗೆಬಗೆಯ ಜೀವಗತಿ? – ಮಂಕುತಿಮ್ಮ || ಕಗ್ಗ ೨೩೦ ||

 

ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು? |
ಧರಣಿಗನುದಿನದ ರಕ್ತಾಭಿಷೇಚನೆಯೆ? ||
ಕರವಾಲವನು ಪುಷ್ಪಸರವೆಂದು ಸೆಳೆದಾಡೆ |
ಪರಿಮಳವ ಸೂಸುವುದೆ? – ಮಂಕುತಿಮ್ಮ || ಕಗ್ಗ ೨೩೧ ||

 

ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ |
ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ||
ನೂನದಿಂದೆಲ್ಲವೆನುವಬ್ಧಿಯೊಳಗದನಿರಿಸೆ |
ಮೌನವದು ಮಣ್ಕರಗಿ – ಮಂಕುತಿಮ್ಮ || ಕಗ್ಗ ೨೩೨ ||

 

ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು |
ಕೆರಳಿಸಲು ನರಹೃದಯರಭಸಗಳನದರಿಂ ||
ಪೊರಮಡುವ ಸಂಮೋಹಧೀರಗಂಭೀರಗಳ |
ಸರಸತೆಯೆ ಸುಂದರವೊ – ಮಂಕುತಿಮ್ಮ || ಕಗ್ಗ ೨೩೩ ||

 

ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು |
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ||
ಹಳೆಯವಿವು ನೀನಿದರೊಳಾವುದನು ಕಳೆದೀಯೊ? |
ಹಳದು ಹೊಸತರೊಳಿರದೆ? – ಮಂಕುತಿಮ್ಮ || ಕಗ್ಗ ೨೩೪ ||

 

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ |
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |
ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ || ಕಗ್ಗ ೨೩೫ ||

 

ನೀಳುಗರೆ ಬಳುಬಳುಕೆ ಕಡಲತೆರೆಯೊಯ್ಯಾರ |
ತಾಳಲಯ ಸೇರೆ ರಾಗದ ನಾಟ್ಯ ಧಾಟಿ ||
ಗೋಳದ ಜ್ವಾಲೆಯಿಂ ಗಗನಪಟ ಸಿಂಗಾರ |
ವೈಲಕ್ಷಣದೊಳಿಂಬು – ಮಂಕುತಿಮ್ಮ || ಕಗ್ಗ ೨೩೬ ||

 

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು |
ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ||
ಎದೆಯನುಕ್ಕಾಗಿಸುತ; ಮತಿಗದೆಯ ಪಿಡಿದು ನೀ- |
ನೆದುರು ನಿಲೆ ಬಿದಿಯೊಲಿವ – ಮಂಕುತಿಮ್ಮ || ಕಗ್ಗ ೨೩೭ ||

 

ಧ್ವನಿತ ಪ್ರತಿಧ್ವನಿತ ಮನುಜಜೀವಿತವೆಲ್ಲ |
ಕುಣಿವುದವನೆದೆ ಜಗತ್ಪ್ರಕೃತಿ ಪಾಡುವವೊಲ್ ||
ಇನಿದಕೊಲವಳಲಿಗನುತಾಪ; ಸೆಣಸಿಗೆ ಬೀರ |
ಘನಗರ್ಜಿತಕೆ ದೈನ್ಯ – ಮಂಕುತಿಮ್ಮ || ಕಗ್ಗ ೨೩೮ ||

 

ಹೊರಗಾವುದೊಳಗಾವುದೀ ಸೃಷ್ಟಿಚಕ್ರದಲಿ |
ಎರಡನೊಂದಾಗಿಪುದು ಹರಿವ ನಮ್ಮುಸಿರು ||
ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ |
ಬರಿ ಸುಷಿರಪಿಂಡ ಜಗ – ಮಂಕುತಿಮ್ಮ || ಕಗ್ಗ ೨೩೯ ||

 

ಹುಲಿಯ ಕೆಣಕುವುದು ಹುಲಿ; ಕಪಿಯನಣಕಿಪುದು ಕಪಿ |
ಹುಲಿಕಪಿಗಳವಿತಿರದ ನರಜಂತುವೆಲ್ಲಿ? ||
ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು |
ಕುಲುಕದಿರು ಬಾಲವನು – ಮಂಕುತಿಮ್ಮ || ಕಗ್ಗ ೨೪೦ ||

 

ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ |
ಕೃಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ||
ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿ |
ಸಮಸದದು ಸತ್ತ್ವವನು – ಮಂಕುತಿಮ್ಮ || ಕಗ್ಗ ೨೪೧ ||

 

ಮಾನವರೊ ದಾನವರೊ ಭೂಮಾತೆಯನು ತಣಿಸೆ |
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ||
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ |
ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ || ಕಗ್ಗ ೨೪೨ ||

 

ಬೀಳಿಸದಿರೆಲೊ ನಿನ್ನ ನೆರಳನಿತರರ ಮೇಲೆ |
ಬಾಳಿಕೊಳುಗವರು ತಂತಮ್ಮ ಬೆಳಕಿನಲಿ ||
ಮೇಲುಬೀಳುಗಳಾರ್ಗದೆಂತೊ ನೀನೇನರಿವೆ? |
ತಾಳದಿರು ಗುರುತನವ – ಮಂಕುತಿಮ್ಮ || ಕಗ್ಗ ೨೪೩ ||

 

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ – ಮಂಕುತಿಮ್ಮ || ಕಗ್ಗ ೨೪೪ ||

 

ಋಣದ ಜಾಲವನಂತ; ಕರುಮಚಕ್ರವನಂತ |
ಜನುಮಜನುಮದ ಕಥೆಯ ತಂತುಗಳನಂತ ||
ಅನವರತ ನೂತನವಿದೆನಿಪ ವಿಶ್ವದ ತಂತ್ರ |

ಬಿನದ ಪರಬೊಮ್ಮಂಗೆ – ಮಂಕುತಿಮ್ಮ || ಕಗ್ಗ ೨೪೫ ||

 

ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |
ಪ್ರತ್ಯೇಕ ಜೀವದಶೆಯವನಂಗಭಂಗಿ ||
ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ |
ಪ್ರತ್ಯಗಾತ್ಮನು ನೀನು – ಮಂಕುತಿಮ್ಮ || ಕಗ್ಗ ೨೪೬ ||

 

ಅನುಬಂಧ ಜೀವಜೀವಕೆ ಪುರಾಕೃತದಿಂದ |
ಮನದ ರಾಗದ್ವೇಷವಾಸನೆಗಳದರಿಂ ||
ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು |
ಕೊನೆಯಿರದ ಬಲೆಯೊ ಅದು – ಮಂಕುತಿಮ್ಮ || ಕಗ್ಗ ೨೪೭ ||

 

ಪಂಚಕವೊ; ಪಂಚ ಪಂಚಕವೊ ಮಾಭೂತಗಳ |
ಹಂಚಿಕೆಯನರಿತೇನು? ಗುಣವ ತಿಳಿದೇನು? ||
ಕೊಂಚ ಕೊಂಚಗಳರಿವು ಪೂರ್ಣದರಿವಾದೀತೆ? |
ಮಿಂಚಿದುದು ಪರರತತ್ತ್ವ – ಮಂಕುತಿಮ್ಮ || ಕಗ್ಗ ೨೪೮ ||

 

ಹೇಳಲಾಗದ ಹಸಿವು; ತಾಳಲಾಗದ ತಪನೆ |
ಆಳದಲಿ ನಾಚನಾಗಿಪ ಚಿಂತೆಯೂಟೆ ||
ಗಾಳಿಯೆತ್ತೆತ್ತಣಿನೊ ತಂದೀವ ಸೋಂಕು—ಇವೆ |
ಬಾಳ ಸಾಮಗ್ರಿಯಲ – ಮಂಕುತಿಮ್ಮ || ಕಗ್ಗ ೨೪೯ ||

 

ಭೋಜನದಿ ಪರಮಭೋಜನ ಪರಬ್ರಹ್ಮರಸ |
ಯಾಚಿಸಲ್ಕೇನಿರ್ಪುದದನುಂಡ ಬಳಿಕ? ||
ತ್ಯಾಜಕ ತ್ಯಾಗ ಸಂತ್ಯಾಜ್ಯ ಭೇದಗಳಿರದೆ |
ರಾಜ ನೀಂ ಜಗಕೆಲ್ಲ – ಮಂಕುತಿಮ್ಮ || ಕಗ್ಗ ೨೫೦ ||

 

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ನುಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದದಾತ್ಮವನೆ – ಮಂಕುತಿಮ್ಮ || ಕಗ್ಗ ೨೫೧ ||

 

ಹೋರು ಧೀರತೆಯಿಂದ; ಮೊಂಡುತನದಿಂ ಬೇಡ |
ವೈರ ಹಗೆತನ ಬೇಡ; ಹಿರಿ ನಿಯಮವಿರಲಿ ||
ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |
ಹೋರುದಾತ್ತತೆಯಿಂದ – ಮಂಕುತಿಮ್ಮ || ಕಗ್ಗ ೨೫೨ ||

 

ವನದಿ ನಿರ್ಜನದಿ ಮೌನದಿ ತಪವನೆಸಗುವನ |
ನೆನಪಿನಲಿ ಪಿಂತಿನನುಭವವುಳಿಯದೇನು? ||
ಇನಿನೋಟ ಸವಿಯೂಟ ಕಿನಿಸು ಕರುಬುಗಳಾಟ |
ಕನಲುತಿಹುವಾಳದಲಿ – ಮಂಕುತಿಮ್ಮ || ಕಗ್ಗ ೨೫೩ ||

 

ವೇದ ಲೋಕಾಚಾರ ನಿನ್ನನುಭವದ ಯುಕ್ತಿ |
ಶೋಧಿಸೀ ಮೂರನುಂ ಸಂವಾದಗೊಳಿಸು ||
ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು |
ಹಾದಿ ಬೆಳಕದು ನಿನಗೆ – ಮಂಕುತಿಮ್ಮ || ಕಗ್ಗ ೨೫೪ ||

 

ಗರಡಿ ಸಾಮಿಂದೆ ನೀನೆದುರಾಳ ಗೆಲದೊಡೇಂ? |
ಬರದಿಹುದೆ ನಿನಗನಿತು ಕಾಯಾಂಗಪಟುತೆ? ||
ವರ ಸದ್ಯಕ್ಕಿಲ್ಲದೊಡೆ ಬರಿದಾಗುವುದೆ ಪೂಜೆ? |
ಪರಿಶುದ್ಧ ಮನವೆ ವರ – ಮಂಕುತಿಮ್ಮ || ಕಗ್ಗ ೨೫೫ ||

 

ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ |
ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೋ ||
ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು |
ಶಂಕೆ ನಿನಗೇನಿಹುದೊ – ಮಂಕುತಿಮ್ಮ || ಕಗ್ಗ ೨೫೬ ||

 

ಇಳಿಯುವೆನು ಮುಳುಗುವೆನು ವಿಶ್ವಾತ್ಮಸಾಗರದಿ |
ಮುಳುಮುಳುಗಿ ಕಳೆಯುವೆನು ಬೇರೆತನದರಿವ ||
ಇಳೆಬಾನ್ಗಳಾಟದಲಿ ಕುಣಿಯುವೆನು ಮೈಮರೆತು |
ಗಳಿಸೀ ಮನಃಸ್ಥಿತಿಯ – ಮಂಕುತಿಮ್ಮ || ಕಗ್ಗ ೨೫೭ ||

 

ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ |
ಆವರಿಸದಳಲ್ ಎಲ್ಲರನುಮೊಂದೆ ಸಮಯ ||
ನೋವಿಲ್ಲದರು ನೊಂದವರನು ಸಂತಯಿಸುತಿರೆ |
ಜೀವನವು ಕಡಿದಹುದೆ? – ಮಂಕುತಿಮ್ಮ || ಕಗ್ಗ ೨೫೮ ||

 

ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ |
ಅನುವಪ್ಪುದೊಂದೊಂದು ರೋಗಕೊಂದೊಂದು ||
ನಿನಗಮಂತೆಯೆ ನೂರು ನೀತಿಸೂತ್ರಗಳಿರಲು |
ಅನುವನರಿವುದೆ ಜಾಣು – ಮಂಕುತಿಮ್ಮ || ಕಗ್ಗ ೨೫೯ ||

 

ಲೋಕದಲಿ ಭಯವಿರಲಿ; ನಯವಿರಲಿ; ದಯೆಯಿರಲಿ |
ನೂಕುನುಗ್ಗುಗಳತ್ತ; ಸೋಂಕುರೋಗಗಳು ||
ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ |
ಲೋಕ ಮೂಲವು ನೋಡೊ – ಮಂಕುತಿಮ್ಮ || ಕಗ್ಗ ೨೬೦ ||

 

ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ |
ಹಸಿವನೊಂದುವನೆ ಹಿರಿಯನು? ನಲಿಯದಿಹನೆ? ||
ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ- |
ದೊಸೆದುನೋಳ್ಪನು ಜಾಣ – ಮಂಕುತಿಮ್ಮ || ಕಗ್ಗ ೨೬೧ ||

 

ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ |
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ? ||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು? |
ಆಟದೋಟವೆ ಲಾಭ – ಮಂಕುತಿಮ್ಮ || ಕಗ್ಗ ೨೬೨ ||

 

ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ? |
ತಾಳಿದರೆ ಬಾಳನಂತಹರುಮ್ ಆಶೆಯಲಿ? ||
ಕಾಲವಿನ್ನಿರದಿಂತು ನಾಳೆ ನೋಡುವಮೆನುತ |
ಮೇಲನೆ ನಿರೀಕ್ಷಿಪರು – ಮಂಕುತಿಮ್ಮ || ಕಗ್ಗ ೨೬೩ ||

 

ಸಿಂಧುವನು ಹಿಮಗಿರಿಗೆ ಹಿಂದಿರುಗಿ ಬೇರೊಂದು |
ಚೆಂದದಲಿ ಪರಿದು ಬಾರೆಂದಾಣತಿಪೆಯಾ? ||
ಸಂದರ್ಭವಿಡಿದು ಜನಚೈತನ್ಯ ಪರಿದಿಹುದು |
ಅಂಧಗತಿಯಲ್ಲವದು – ಮಂಕುತಿಮ್ಮ || ಕಗ್ಗ ೨೬೪ ||

 

ದೊರೆವ ಜೀತಕೆ ದುಡಿತ; ಮರುದಿನದ ಚಿಂತೆ ಮಿತ |
ಹೊರೆಯ ಹಗುರಾಗಿಸುವ ಕೆಳೆಯರೊಡನಾಟ ||
ಸರಳತೆಯ ಪರಿತುಷ್ಟಿ; ಪರಮಾರ್ಥ ದೃಷ್ಟಿಯಿವು |
ಸರಿಗೂಡೆ ಸುಕೃತವದು – ಮಂಕುತಿಮ್ಮ || ಕಗ್ಗ ೨೬೫ ||

 

ಏನು ಜೀವನದರ್ಥ? ಏನು ಪ್ರಪಂಚಾರ್ಥ? |
ಏನು ಜೀವಪ್ರಪಂಚಗಳ ಸಂಬಂಧ? ||
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? |
ಜ್ಞಾನ ಪ್ರಮಾಣವೇಂ? – ಮಂಕುತಿಮ್ಮ || ಕಗ್ಗ ೨೬೬ ||

 

ನಿನ್ನೆಂಜಲಗುಳಾವ ಕಾಲುವೆಯ ಸೇರುವುದೊ! |
ಮಣ್ಣಾವುದದರಿಂದೆ ಗರ್ಭವತಿಯಹುದೋ! ||
ಅನ್ನವದರಿಂದಾರ್ಗೊ! ಲೋಕಕವರಿಂದೇನೊ! |
ಬಣ್ನಿಸುವರಾರದನು? – ಮಂಕುತಿಮ್ಮ || ಕಗ್ಗ ೨೬೭ ||

 

ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು |
ತುಸಿರಾಗಿ ನಮ್ಮೊಳಾವಗಮಾಡುವಂತೆ ||
ವಿಸರಸತ್ತ್ವಮದೊಂದದೆತ್ತಣಿನೊ ಬಂದು ನ |
ಮ್ಮಸುಗಳೊಳವೊಗುತಿಹುದು – ಮಂಕುತಿಮ್ಮ || ಕಗ್ಗ ೨೬೮ ||

 

ಆಶೆ ಬಲೆಯನು ಬೀಸಿ; ನಿನ್ನ ತನ್ನೆಡೆಗೆಳೆದು |
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ||
ಮೈಸವರಿ ಕಾಲನೆಡವಿಸಿ; ಗುಟ್ಟಿನಲಿ ನಗುವ |
ಮೋಸದಾಟವೊ ದೈವ – ಮಂಕುತಿಮ್ಮ || ಕಗ್ಗ ೨೬೯ ||

 

ಶಕ್ತಿ ಕರಣಕ್ಕಿರಲಿ; ರಸ ಸಂಗ್ರಹಣ ಶಕ್ತಿ |
ಯುಕ್ತವದರೊಡನಿರಲಿ ಭೋಗದಿ ವಿರಕ್ತಿ ||
ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ |
ಉತ್ತಮೋತ್ತಮ ಸುಕೃತಿ – ಮಂಕುತಿಮ್ಮ || ಕಗ್ಗ ೨೭೦ ||

 

ತೆರಪನರಿಯದೆ ಪರಿವ ಕಾಲಪ್ರವಾಹದಲಿ |
ಪುರುಷರಚಿತಗಳೆನಿತೊ ತೇಲಿಹೋಗಿಹವು ||
ಪುರ ರಾಷ್ಟ್ರ ದುರ್ಗಗಳು; ಮತ ನೀತಿ ಯುಕ್ತಿಗಳು |
ಪುರುಷತನ ನಿಂತಿಹುದು – ಮಂಕುತಿಮ್ಮ || ಕಗ್ಗ ೨೭೧ ||

 

ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ |
ಹಾದಿತೋರಲು ನಿಶಿಯೊಳುರಿವ ಪಂಜುಗಳು ||
ಸೌಧವೇರಿದವಂಗೆ; ನಭವ ಸೇರಿದವಂಗೆ |
ಬೀದಿಬೆಳಕಿಂದೇನೊ? – ಮಂಕುತಿಮ್ಮ || ಕಗ್ಗ ೨೭೨ ||

 

ತನ್ನ ಶಕ್ತಿಯನಳೆದು; ತನ್ನ ಗುಣಗಳ ಬಗೆದು |
ಸನ್ನಿವೇಶದ ಸೂಕ್ಷ್ಮವರಿತು; ಧೃತಿದಳೆದು ||
ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ |
ಪುಣ್ಯಶಾಲಿಯ ಪಾಡು – ಮಂಕುತಿಮ್ಮ || ಕಗ್ಗ ೨೭೩ ||

 

ಪರಬೊಮ್ಮನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೊ ನಿದ್ದೆ ಕಲವರವೋ? ||
ಮರುಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೊ? – ಮಂಕುತಿಮ್ಮ || ಕಗ್ಗ ೨೭೪ ||

 

ಸರ್ವಹಿತವೊಂದುಂಟೆ? ಅದಕೆ ಪಥ ನಮಗುಂಟೆ? |
ನಿರ್ವಾಹಸಾಧನಗಳೆತ್ತ? ಗುರುವೆತ್ತ? ||
ಪೂರ್ವವನು ನೆಟ್ಟಗಿಪ ನರಕೃತಿಯಿನಾಗದೇನ್ |
ಅರ್ವಾಚಿಯಲಿ ಸೊಟ್ಟು? – ಮಂಕುತಿಮ್ಮ || ಕಗ್ಗ ೨೭೫ ||

 

ಕಳವಳವ ನೀಗಿಬಿಡು; ತಳಮಳವ ದೂರವಿಡು |
ಕಳೆ; ತಳ್ಳು ಗಲಭೆ ಗಾಬರಿಯ ಮನದಿಂದ ||
ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು |
ತಿಳಿತಿಳಿವು ಶಾಂತಿಯಲಿ – ಮಂಕುತಿಮ್ಮ || ಕಗ್ಗ ೨೭೬ ||

 

ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳಲದು |
ಆಳೆನಿಪುದಂತಾಗದಿರೆ ಬರಿಯ ಹೆಂಟೆ ||
ಬಾಳೇನು ಧೂಳು ಸುಳಿ; ಮರ ತಿಕ್ಕಿದುರಿಯ ಹೊಗೆ |
ಕ್ಷ್ವೇಳವೇನಮೃತವೇಂ? – ಮಂಕುತಿಮ್ಮ || ಕಗ್ಗ ೨೭೭ ||

 

ಸತ್ಯ ಶಿವ ಸುಂದರದ ಸಚ್ಚಿದಾನಂದನದ |
ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ ||
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ |
ವೃತ್ತಿ ತನ್ಮಯವಹುದೊ – ಮಂಕುತಿಮ್ಮ || ಕಗ್ಗ ೨೭೮ ||

 

ಮತಿಯು ತಾಂ ಸತ್ಯಶುಭಗಳ ನವನವಾಂಶಗಳ |
ಗತಿಯನರಸುತ ನಡೆಯೆ ಪೌರುಷಪ್ರಗತಿ ||
ಮತ ನೀತಿ ಶಾಸ್ತ್ರಗಳು ರಾಜ್ಯಸಂಧಾನಗಳು |
ಮತಿಯ ಕಿಂಚಿದ್ವಿಜಯ – ಮಂಕುತಿಮ್ಮ || ಕಗ್ಗ ೨೭೯ ||

 

ಮನೆಯೆಲ್ಲಿ ಸತ್ಯಕ್ಕೆ? ಶ್ರುತಿ ತರ್ಕಮಾತ್ರದೊಳೆ? |
ಅನುಭವಮುಮದರೊಂದು ನೆಲೆಯಾಗದಿಹುದೇಂ? ||
ಮನು{ಜ}ಹೃದಯಾಂಗಣದೊಳೆನಿತೆನಿತೊ ದನಿಯುದಿಸಿ |
ಅಣಕಿಪುವು ತರ್ಕವನು – ಮಂಕುತಿಮ್ಮ || ಕಗ್ಗ ೨೮೦ ||

 

ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |
ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||
ಖೇಲನವ ಬೇಡವೆನುವರನು ವಿಧಿರಾಯನವ— |
ಹೇಳಿಪನು ಸೆರೆವಿಡಿದು – ಮಂಕುತಿಮ್ಮ || ಕಗ್ಗ ೨೮೧ ||

 

ನಾಸಿಕದ ಮಾಟದಿಂದಾ ಕ್ಲಿಯೋಪ್ಯಾಟ್ರಳಿಗೆ |
ದಾಸರಾದರು ಶೂರ ಸೀಸರ್ ಆಂಟನಿಗಳ್ ||
ದೇಶಚರಿತೆಗಮವರ ಜಸಕಮಂಕುಶವಾಯ್ತು |
ನಾಸಾಪುಟದ ರೇಖೆ – ಮಂಕುತಿಮ್ಮ || ಕಗ್ಗ ೨೮೨ ||

 

ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು |
ಪರಮಾತ್ಮದರ್ಶನವ; ಬೇಕದಕೆ ತಪಸು ||
ಪರಿಪೂರ್ಣ ಜೀವನಾನುಭವತಾಪದಿ ಮತಿಯು |
ಪರಿಪಕ್ವವಾಗಲದು – ಮಂಕುತಿಮ್ಮ || ಕಗ್ಗ ೨೮೩ ||

 

ನೂತ್ನತೆಯ ಪೂರ್ಣತೆಯನನ್ಯೂನತೆಯ ಗಳಿಪ |

ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ ||
ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ |
ಧನ್ಯತೆಯ ಬೆದಕಾಟ – ಮಂಕುತಿಮ್ಮ || ಕಗ್ಗ ೨೮೪ ||

ಏನು ಭೈರವಲೀಲೆಯೀ ವಿಶ್ವವಿಭ್ರಮಣೆ! |

ಏನು ಭೂತಗ್ರಾಮನರ್ತನೋನ್ಮಾದ! ||
ಏನಗ್ನಿ ಗೋಳಗಳು! ಏನಂತರಾಳಗಳು! |

ಏನು ವಿಸ್ಮಯ ಸೃಷ್ಟಿ? – ಮಂಕುತಿಮ್ಮ || ಕಗ್ಗ ೨೮೫ ||

 

ತಲೆಯ ಮೇಗಡೆ ಬೇರು; ಕೆಳಗೆ ಕೊಂಬೆಲೆ ಚಿಗುರು |

ಬಿಳಲೂರೆಗಳ ಲೆಕ್ಕಕಿಲ್ಲ ಕೊನೆ ಮೊದಲು ||
ಬೆಳೆವುದೀ ಪರಿಯರಳಿಮರದಂತೆ ನರಕೋಟಿ |
ನಲಿವನದರಲಿ ಬೊಮ್ಮ – ಮಂಕುತಿಮ್ಮ || ಕಗ್ಗ ೨೮೬ ||

 

ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ |
ಫಲವದೆಂತಹುದೆಂಬ ಶಂಕೆಗೆಡೆಯುಂಟೆ? ||
ಒಳಿತರೊಳೆ ನೀಂ ಬಾಳು; ಪರವದೆಂತಿರ್ಡೊಡೇಂ? |
ಇಳೆಯೆ ಬಾಗಿಲು ಪರಕೆ – ಮಂಕುತಿಮ್ಮ || ಕಗ್ಗ ೨೮೭ ||

 

ದೇವರದಿದೆಲ್ಲ ದೇವರಿಗೆಲ್ಲವೆಂದೊರಲು- |
ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ||
ದಾವನ್ತಬಡುತ ತನ್ನಿಚ್ಛೆಯನೆ ಘೋಷಿಸುವ |
ಭಾವವೆಂತಹ ಭಕುತಿ? – ಮಂಕುತಿಮ್ಮ || ಕಗ್ಗ ೨೮೮ ||

 

ಅನಿಲಗುಣ ಭೂಗುಣಗಳಿಂ ಸಸ್ಯಧಾನ್ಯಗುಣ |
ತನುಗುಣಗಳನ್ನದಿಂ; ಮನದ ಗುಣ ತನುವಿಂ ||
ಜನಪದವಿಧಂಗಳಿಂತಾಗಿಹುವು ಸೃಷ್ಟಿಯಿನೆ |
ಮನುವೊಬ್ಬ; ಜನತೆ ಶತ – ಮಂಕುತಿಮ್ಮ || ಕಗ್ಗ ೨೮೯ ||

 

ಪರಿಪರಿ ಪರೀಕ್ಷೆಗಳು; ಪರಿಭವದ ಶಿಕ್ಷೆಗಳು |
ಗರಡಿಯ ವ್ಯಾಯಾಮ ಮನಬುದ್ಧಿಗಳಿಗೆ ||
ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ |
ಬಿರಿದ ನನೆ ಫಲಕೆ ಮನೆ – ಮಂಕುತಿಮ್ಮ || ಕಗ್ಗ ೨೯೦ ||

 

ಸಿರಿದರಿದ್ರತೆಗಳ್ಗೆ ಫಲದೊಳಂತರ ಕಿರಿದು |
ಸರಿತಪ್ಪುಗಳಿಗಂತು; ಜಾಣ್ ಬೆಪ್ಪುಗಳ್ಗಂ ||
ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ |
ಪರವೆಯೆಂತಾದೊಡೇಂ? – ಮಂಕುತಿಮ್ಮ || ಕಗ್ಗ ೨೯೧ ||

 

ಸ್ವರರಾಗಗೀತಿಗಳು ನಾಟ್ಯಾಭಿನೀತಿಗಳು |
ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ ||
ಪರಿಪರಿಯ ಭಾವಗಳ ಗೂಢಸ್ವಭಾವಗಳ |
ಪರಮೇಷ್ಠಿ ಟೀಕು ಕಲೆ – ಮಂಕುತಿಮ್ಮ || ಕಗ್ಗ ೨೯೨ ||

 

ಅಳಬೇಕು; ನಗಬೇಕು; ಸಮತೆ ಶಮವಿರಬೇಕು |
ಹೊಳೆಯ ನೆರೆವೂಲು ಹೃದಯರಸ ಹರಿಯಬೇಕು ||
ಅಲೆಯಿನರಲು ಗದ ಬಂಡೆಯವೊಲಾತ್ಮವಿರಬೇಕು |
ತಿಳಿದವರ ಚರಿತವದು – ಮಂಕುತಿಮ್ಮ || ಕಗ್ಗ ೨೯೩ ||

 

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ |
ಬಿಡಿಗಾಸು ಹೂವಳಗೆ – ಮಂಕುತಿಮ್ಮ || ಕಗ್ಗ ೨೯೪ ||

 

ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ |
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ||
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು |
ಸ್ವಸ್ತಿಗಾವಶ್ಯಕವೊ – ಮಂಕುತಿಮ್ಮ || ಕಗ್ಗ ೨೯೫ ||

 

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ |
ಸನ್ನಾಹ ಸಾಗೀತೆ? ದೈವವೊಪ್ಪೀತೆ? ||
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ; ಭಿನ್ನಿಸಲಿ; |
ನಿನ್ನ ಬಲವನು ಮೆರಸೊ – ಮಂಕುತಿಮ್ಮ || ಕಗ್ಗ ೨೯೬ ||

 

ಪುರುಷಯೋಚನೆಯಿಲ್ಲ ಮುರಿದು ಮಣ್ಣಹುದೆಂದು |
ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು ||
ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? |
ಪರವೆಯೇನಿಲ್ಲವೆಲೊ – ಮಂಕುತಿಮ್ಮ || ಕಗ್ಗ ೨೯೭ ||

 

ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು |
ಕರಯುಕ್ತಿ ಪೆರ್ಚಿಯೋ; ದೈವ ಕರುಣಿಸಿಯೋ ||
ಕರುಮಋಣ ಸಂಧಿಸಿಯೊ ಕೈಗೂಡಬಹುದು ಗುರಿ |
ಪರವೆಯಿಡದುಜ್ಜುಗಿಸು – ಮಂಕುತಿಮ್ಮ || ಕಗ್ಗ ೨೯೮ ||

 

ಆಳನೀಳಗಳ ಕಾಣಲ್ಕಾಗಿಸದೆ ಮೊರೆವ |
ಬಾಳ ಕಡಲೊಳು ಮುಳುಗಿ ತಳದಿಂದಲೆದ್ದು ||
ಪೇಳುವರದಾರು ನ್ಯಾಯಾನ್ಯಾಯ ವಿವರಗಳ |
ಗಾಳಿಗಾಬರಿಯೆಲ್ಲ – ಮಂಕುತಿಮ್ಮ || ಕಗ್ಗ ೨೯೯ ||

 

ಸಾಧ್ಯಪಡದಾರಿಗಂ ನರಭಾಲಪಟ್ಟವನು |
ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ||
ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ |
ಬುದ್ಧಿನುಡಿ ಸೈರಣೆಯೆ – ಮಂಕುತಿಮ್ಮ || ಕಗ್ಗ ೩೦೦ ||

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |

ಹೊರಕೋಣೆಯಲಿ ಲೋಗರಾಟಗಳನಾಡು ||

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |

ವರಯೋಗಸೂತ್ರವಿದು – ಮಂಕುತಿಮ್ಮ || ಕಗ್ಗ ೩೦೧ ||

ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೊ |

ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ ||

ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು |

ನೆನೆಯದಾತ್ಮದ ಸುಖವ – ಮಂಕುತಿಮ್ಮ || ಕಗ್ಗ ೩೦೨ ||

ಎಲ್ಲ ಬರಿ ಗೊಣಗಾಟ; ತಿಣಕಾಟ; ತಡಕಾಟ |

ಇಲ್ಲ ನಮಗೂರೆಕೋಲ್; ತಿಳಿಬೆಳಕುಮಿಲ್ಲ ||

ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು |

ಸಲ್ಲದುಬ್ಬಟೆ ನಮಗೆ – ಮಂಕುತಿಮ್ಮ || ಕಗ್ಗ ೩೦೩ ||

 

ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ |

ಇಬ್ಬರಾಗುವೆನೆಂದನಂತೆ ಪರಬೊಮ್ಮಂ ||

ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? |

ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ || ಕಗ್ಗ ೩೦೪ ||

 

ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು |

ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ||

ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು |

ನೆಲೆಯೆಲ್ಲಿ ನಿದ್ದೆಗೆಲೊ? – ಮಂಕುತಿಮ್ಮ || ಕಗ್ಗ ೩೦೫ ||

 

ಅಂತಾನುಮಿಂತಾನುಮೆಂತೊ ನಿನಗಾದಂತೆ |

ಶಾಂತಿಯನೆ ನೀನರಸು ಮನ ಕೆರಳಿದಂದು || ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |

ಸ್ವಾಂತಮಂ ತಿದ್ದುತಿರು – ಮಂಕುತಿಮ್ಮ || ಕಗ್ಗ ೩೦೬ ||

ಆವ ಋಣಕೋಸುಗವೊ; ಆರ ಹಿತಕೋಸುಗವೊ |

ಆವಾವ ಕಾರಣಕೊ; ಆವ ಯೋಜನೆಗೋ ||

ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ? |

ದೈವ ಕುರುಡೆನ್ನದಿರು – ಮಂಕುತಿಮ್ಮ || ಕಗ್ಗ ೩೦೭ ||

ಪರಹಿತದ ಮಾತಿರಲಿ; ಪರರಿನೇ ಜೀವಿಪನು |

ನರಜಂತು; ಪಶು ಪಕ್ಷಿ ಕೀಟ ಮೀನ್ಗಳವೋಲ್ ||

ಪರರಿನೆಳಸದದೇನನುಂ ಪರರಿಗುಪಕರಿಪ |

ತರುಜನ್ಮವಲ ಪುಣ್ಯ! – ಮಂಕುತಿಮ್ಮ || ಕಗ್ಗ ೩೦೮ ||

ಪರಮಲಾಭವ ಗಳಿಸೆ ಜೀವಿತವ್ಯಾಪಾರ- |

ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||

ಚಿರಲಾಭ ಜಗದಾತ್ಮಲೀಲಾವಿಹಾರಸುಖ |

ಧರೆಯ ಸುಖ ಮೇಲ್ಬಡ್ಡಿ – ಮಂಕುತಿಮ್ಮ || ಕಗ್ಗ ೩೦೯ ||

ಔದಾರ್ಯ ತಾಯಿ ನೀತಿಗೆ; ಧೈರ್ಯವೇ ತಂದೆ |

ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ ||

ಹೋದುದನು ನೆನೆಯದಿರು; ಬರುವುದಕೆ ಸಿದ್ಧನಿರು |

ಆದನಿತು ಸಂತೋಷ – ಮಂಕುತಿಮ್ಮ || ಕಗ್ಗ ೩೧೦ ||

ಬಹುರಹಸ್ಯವೊ ಸೃಷ್ಟಿ; ಬಹುರಹಸ್ಯವೊ ಜೀವ |

ಅಹುದದಲ್ಲವಿದೆಂಬ ವಾದ ಬರಿ ಹರಟೆ ||

ಗುಹೆಯೊಳಿಹುದೆಲ್ಲ ತತ್ತ್ವಗಳ ತತ್ತ್ವದ ಮೂಲ |

ಬಹಿರಂತರ ರಹಸ್ಯ – ಮಂಕುತಿಮ್ಮ || ಕಗ್ಗ ೩೧೧ ||

ಮೂರಿರಲಿ ವಾದ; ಮುನ್ನೂರಿರಲಿ; ಸಕಲರುಂ |

ಸಾರವಸ್ತುವನೊಂದನೊಪ್ಪಿಕೊಳುವವರೇ ||

ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |

ಭಾರವಾಗದು ಜಗಕೆ – ಮಂಕುತಿಮ್ಮ || ಕಗ್ಗ ೩೧೨ ||

ಮುದಿಕುರುಡಿ ಹೊಂಗೆಯನು “ಬಾದಾಮಿ; ಕೋ’ಯೆನುತ |

ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ||

ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? |

ಸುಧೆ ಬಂತೆ ಸುಲಭದಲಿ? – ಮಂಕುತಿಮ್ಮ || ಕಗ್ಗ ೩೧೩ ||

ಹರಿಭಜಕರೊಳು ಭಯದಿನೊಗೆದುದೆನಿಬರ ಭಕುತಿ |

ಮರದ ಮೇಲಣ ಭಕ್ತಿಯೆನಿಬರದು ನೋಡೆ? ||

ಬರಿಯ ಸಂತೋಷದನುರಾಗರಸ ನಿಜಭಕ್ತಿ- |

ಪರಮದಾಕರ್ಷೆಯದು – ಮಂಕುತಿಮ್ಮ || ಕಗ್ಗ ೩೧೪ ||

ಸತ್ಯಾನುಭವವೆಲ್ಲರಿಂಗಮೊಂದೆಂತಹುದು? |

ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ||

ಎತ್ತರದ ದೃಶ್ಯ ಕಣಿವೆಯೊಳಿಹನಿಗಾದೀತೆ? |

ನೇತ್ರದಂದದೆ ನೋಟ – ಮಂಕುತಿಮ್ಮ || ಕಗ್ಗ ೩೧೫ ||

ಆದಿದಿವಸವದಾವುದೆಂದೆಂದುಮಿಹ ಜಗಕೆ? |

ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||

ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ |

ಸೇದಿಕೊಂಡಿರೆ ಲಯವೊ – ಮಂಕುತಿಮ್ಮ || ಕಗ್ಗ ೩೧೬ ||

ತರಣಿದರ್ಶನಕಿಂತ ಕಿರಣಾನುಭವ ಸುಲಭ |

ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ ||

ಪರಮತತ್ತ್ವವ ಕಂಡ ಗುರುವನರಸುವುದೆಲ್ಲಿ? |

ದೊರೆತಂದು ನೀಂ ಧನ್ಯ – ಮಂಕುತಿಮ್ಮ || ಕಗ್ಗ ೩೧೭ ||

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು |

ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ ||

ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ |

ಸಹಭಾವವದಕೆ ಸರಿ – ಮಂಕುತಿಮ್ಮ || ಕಗ್ಗ ೩೧೮ ||

ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? |

ಅರಿಯದದು ನಮ್ಮೆದೆಯ ಭಾವಗಳನೊರೆಯೆ ||

ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |

ಒರಟುಯಾನವೊ ಭಾಷೆ – ಮಂಕುತಿಮ್ಮ || ಕಗ್ಗ ೩೧೯ ||

ಪಂಚಭೂತಗಳಂತೆ; ಪಂಚೇಂದ್ರಿಯಗಳಂತೆ |

ಪಂಚವೇಕೆ? ಚತುಷ್ಕ ಷಟ್ಕವೇಕಲ್ಲ? ||

ಹೊಂಚುತಿಹನಂತೆ ವಿಭು; ಸಂಚವನದೇನಿಹುದೊ |

ವಂಚಿತರು ನಾವೆಲ್ಲ – ಮಂಕುತಿಮ್ಮ || ಕಗ್ಗ ೩೨೦ ||

ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲಿ |

ಪರಮಾರ್ಥಕೊಂದು; ಸಾಂಪ್ರತದರ್ಥಕೊಂದು ||

ಪರಿಕಿಸೆರಡಂ ನೀನು; ಹೊರಬೆಲೆಯ ಗುಣಿಪಂದು |

ಮರೆಯಬೇಡೊಳಬೆಲೆಯ – ಮಂಕುತಿಮ್ಮ || ಕಗ್ಗ ೩೨೧ ||

ಭಕ್ತಿ ನಂಬುಗೆ ಸುಲಭ; ಭಜನೆ ವಂದನೆ ಸುಲಭ |

ತತ್ತ್ವಶೋಧನೆ ಕಷ್ಟ; ಮತಿಕಾರ್ಯ ಕಷ್ಟ ||

ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ |

ಹತ್ತುವನು ತಾಪಸಿಯೊ – ಮಂಕುತಿಮ್ಮ || ಕಗ್ಗ ೩೨೨ ||

ಅರ್ಥವುಂಟನುಭವಕ್ಕಾದೊಡದು ಮಿತದರ್ಥ |

ಸ್ವಾರ್ಥ ಮಿತವಾದಂತೆ ವಿಸ್ತರಿಪುದರ್ಥ ||

ಸಾರ್ಥಕವದಪ್ಪುದಾರ್ಷೇಯಾರ್ಥದೊಡವೆರೆಯೆ |

ಪಾರ್ಥನನುಭವದಂತೆ – ಮಂಕುತಿಮ್ಮ || ಕಗ್ಗ ೩೨೩ ||

ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು |

ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ||

ಪುಣ್ಯವೋ; ಪಾಪವೋ; ಅಹಿತವೋ; ಹಿತವೊ ಅದು |

ಚೆನ್ನಹುದು ಬೊಮ್ಮನಲಿ – ಮಂಕುತಿಮ್ಮ || ಕಗ್ಗ ೩೨೪ ||

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |

ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||

ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ |

ನಿತ್ಯ ಭೋಜನ ನಮಗೆ – ಮಂಕುತಿಮ್ಮ || ಕಗ್ಗ ೩೨೫ ||

ಹುಳು ಹುಟ್ಟಿ ಸಾಯುತಿರೆ; ನೆಲ ಸವೆದು ಕರಗುತಿರೆ |

ಕಡಲೊಳೆತ್ತಲೊ ಹೊಸ ದ್ವೀಪವೇಳುವುದು ||

ಕಳೆಯುತೊಂದಿರಲಿಲ್ಲಿ; ಬೆಳೆವುದಿನ್ನೊಂದೆಲ್ಲೊ |

ಅಳಿವಿಲ್ಲ ವಿಶ್ವಕ್ಕೆ – ಮಂಕುತಿಮ್ಮ || ಕಗ್ಗ ೩೨೬ ||

ಕಾಗೆಯುಂ ಕೋಗಿಲೆಯುಮೊಂದೆ ಮೇಲ್ನೋಟಕ್ಕೆ |

ಯೋಗಿಯುಂ ಸಂಸಾರಭೋಗಿಯೇ ಹೊರಕೆ ||

ಲೋಗರವೊಲಿರುತೆ ಸುಖದುಃಖಸಂಭ್ರಮಗಳಲಿ |

ತ್ಯಾಗಿಯವನಂತರದಿ – ಮಂಕುತಿಮ್ಮ || ಕಗ್ಗ ೩೨೭ ||

ಸ್ವಾರಸ್ಯವಮಿತಮಾರಿಗುಮಿರದು ಜೀವನದಿ |

ಪಾರದಿರ್ಕೆಯ ನೆನೆದು ನಡೆಯಲದು ಸಫಲ ||

ಸಾರಂಗಳ್ ಎಲ್ಲ ಪಣ್ಗಳವುಮ್ ಒಂದರೊಳಿರವು |

ಆರೋಗಿಸಿರುವುದನು – ಮಂಕುತಿಮ್ಮ || ಕಗ್ಗ ೩೨೮ ||

ವೇದಾಂತವಾಕ್ಯಗಳ ನಮಕಾನುವಾಕಗಳ |

ಕೇದಾರಗೌಳ ಮಣಿರಂಗಾರಭಿಗಳ ||

ನಾದಂಗಳಲಿ ಮನವ ಬೆರಸಿ ನೀನುತ್ಕ್ರಮಿಸೆ |

ಸಾಧನವೊ ಮುಕ್ತಿಗದು – ಮಂಕುತಿಮ್ಮ || ಕಗ್ಗ ೩೨೯ ||

ರಾಮನಡಿಯಿಟ್ಟ ನೆಲ; ಭೀಮನುಸಿರಿದ ಗಾಳಿ |

ವ್ಯೋಮದೆ ಭಗೀರಥಂ ತಂದ ಸುರತಟಿನಿ |

ಸೋಮನಂ ಪೆತ್ತ ಕಡಲೀ ಪುರಾತನಗಳಿರೆ |

ನಾಮೆಂತು ಹೊಸಬರೆಲೊ – ಮಂಕುತಿಮ್ಮ || ಕಗ್ಗ ೩೩೦ ||

ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ |

ಧರಣಿಯವು; ಗಗನದವು; ಮನುಜಯತ್ನದವು ||

ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ |

ಅರಿವುಳ್ಳೊಲುಮೆ ಪಿರಿದು – ಮಂಕುತಿಮ್ಮ || ಕಗ್ಗ ೩೩೧ ||

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? |

ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ||

ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು |

ಗುಣಕೆ ಕಾರಣವೊಂದೆ? – ಮಂಕುತಿಮ್ಮ || ಕಗ್ಗ ೩೩೨ ||

ಆಟವೋ ಮಾಟವೋ ಕಾಟವೋ ಲೋಕವಿದು |

ಊಟ ಉಪಚಾರಗಳ ಬೇಡವೆನ್ನದಿರು ||

ಪಾಟವವು ಮೈಗಿರಲಿ; ನೋಟ ತತ್ತ್ವದೊಳಿರಲಿ |

ಪಾಠಿಸು ಸಮನ್ವಯವ – ಮಂಕುತಿಮ್ಮ || ಕಗ್ಗ ೩೩೩ ||

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ |

ಮೇರುವನು ಮರೆತಂದೆ ನಾರಕಕೆ ದಾರಿ ||

ದೂರವಾದೊಡದೇನು? ಕಾಲು ಕುಂಟಿರಲೇನು? |

ಊರ ನೆನಪೇ ಬಲವೊ – ಮಂಕುತಿಮ್ಮ || ಕಗ್ಗ ೩೩೪ ||

ಎದೆ ಮಾರುವೋಗದೊಡೆ; ಕಣ್ ಸೊಬಗನುಂಡರೇಂ? |

ಹೃದಯ ಮುಯ್ ಕೇಳದೊಡೆ; ನಲವ ಸೂಸಿದರೇಂ? ||

ಕದಡದಿರ್ದೊಡೆ ಮನವ; ತನು ಸೊಗವ ಸವಿದೊಡೇಂ? |

ಮುದ ತಾನೆ ತಪ್ಪಲ್ಲ – ಮಂಕುತಿಮ್ಮ || ಕಗ್ಗ ೩೩೫ ||

ಮನದ ಭಾವಗಳ ಪೂರ್ಣದಿನೊರೆಯಲರಿತ ಕವಿ |

ಇನಿತನುಂ ಬಿಡದೆ ರೂಪಿಸಲರಿತ ಶಿಲ್ಪಿ ||

ಅನುರೂಪದಿಂದ ವಾಸ್ತವಗೊಳಿಪ ಕೃತಿಚತುರ |

ಧನಿಯರಿವರೆಲ್ಲಿಹರೊ? – ಮಂಕುತಿಮ್ಮ || ಕಗ್ಗ ೩೩೬ ||

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |

ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ||

ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |

ವಿಹರಿಪನು ನಿರ್ಲಿಪ್ತ! – ಮಂಕುತಿಮ್ಮ || ಕಗ್ಗ ೩೩೭ ||

ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ |

ಸರಿ ತನಗೆ ತೋರ್ದನಿತನ್ ಅದರೊಳವನೀವಂ ||

ಅರಿಕೆಯೆಲ್ಲವ ನಡಸದಿರೆ ದೊರೆಯೆ ಸುಳ್ಳಹನೆ? |

ಕರುಣೆ ನಿರ್ಬಂಧವೇಂ? – ಮಂಕುತಿಮ್ಮ || ಕಗ್ಗ ೩೩೮ ||

ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! |

ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ! ||

ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು! |

ಗುಪ್ತಗಾಮಿನಿಯೊ ಋಣ – ಮಂಕುತಿಮ್ಮ || ಕಗ್ಗ ೩೩೯ ||

ಹಿಂದಣದರುಳಿವಿರದು; ಮುಂದಣದರುಸಿರಿರದು |

ಒಂದರೆಕ್ಷಣ ತುಂಬಿ ತೋರುವುದನಂತ ||

ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ |

ಸುಂದರದ ಲೋಕವದು – ಮಂಕುತಿಮ್ಮ || ಕಗ್ಗ ೩೪೦ ||

ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ |

ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ |

ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು |

ಶ್ರೇಯಸ್ಸು ಧೀಮಹಿಮೆ – ಮಂಕುತಿಮ್ಮ || ಕಗ್ಗ ೩೪೧ ||

ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ |

ಮಹಿಮೆಯಲ್ಲೇನೆಂದು ಸಂಶಯಿಸಬೇಡ ||

ವಿಹಿತಗೈದವರಾರು ವಸತಿಯಂ ದೈವಕ್ಕೆ? |

ಮಹಿಮೆ ಮನಸೋತೆಡೆಯೊ – ಮಂಕುತಿಮ್ಮ || ಕಗ್ಗ ೩೪೨ ||

ದೇವಮಂದಿರ ಭಜನೆ ಪೂಜೆ ಪ್ರಸಾದಗಳು |

ಜೀವನದಲಂಕಾರ; ಮನಸಿನುದ್ಧಾರ ||

ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- |

ದಾವುದಾದೊಡಮೊಳಿತು – ಮಂಕುತಿಮ್ಮ || ಕಗ್ಗ ೩೪೩ ||

ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ |

ಭೋಜನವ ನೀಡೆನೆನೆ ಮನ ಸುಮ್ಮನಿಹುದೆ? ||

ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ |

ರಾಜಯೋಗದುಪಾಯ – ಮಂಕುತಿಮ್ಮ || ಕಗ್ಗ ೩೪೪ ||

ಏಕವಾಗವೆ ದೈವಚಿತ್ತ ನರಚಿತ್ತಗಳು? |

ಏಕೆನ್ನ ಮನವನಾಳನು ಲೋಕದೊಡೆಯಂ? ||

ಬೇಕೆನಿಪುದೊಂದೆನಗೆ; ವಿಧಿ ಗೆಯ್ವುದಿನ್ನೊಂದು |

ಈ ಕುಟಿಲಕೇಂ ಮದ್ದು? – ಮಂಕುತಿಮ್ಮ || ಕಗ್ಗ ೩೪೫ ||

ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು |

ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ||

ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ |

ಮಾನವತೆ ನಿಂತಿಹುದು – ಮಂಕುತಿಮ್ಮ || ಕಗ್ಗ ೩೪೬ ||

ಆತುರತೆಯೇನಿರದು ವಿಧಿಯಂತ್ರಚಲನೆಯಲಿ |

ಭೀತತೆಯುಮಿರದು; ವಿಸ್ಮೃತಿಯುಮಿರದೆಂದುಂ ||

ಸಾಧಿಪುದದೆಲ್ಲವನು ನಿಲದೆ; ತಪ್ಪದೆ; ಬಿಡದೆ |

ಕಾತರತೆ ನಿನಗೇಕೆ? – ಮಂಕುತಿಮ್ಮ || ಕಗ್ಗ ೩೪೭ ||

ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? |

ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ ||

ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು |

ವಿಧಿಯ ಬಗೆಯೆಂತಿಹುದೊ! – ಮಂಕುತಿಮ್ಮ || ಕಗ್ಗ ೩೪೮ ||

ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ |

ಚೆಲ್ವುರೂಪಿಂ ಬಂದು ಕಣ್ಕುಕ್ಕುವನಕ ||

ವಲ್ಗುರೂಪ ಸುಭದ್ರೆ ಕಣ್ಮುಂದೆ ಸುಳಿವನಕ |

ಫಲ್ಗುಣನು ಸಂನ್ಯಾಸಿ – ಮಂಕುತಿಮ್ಮ || ಕಗ್ಗ ೩೪೯ ||

ಸಮವಿಲ್ಲ ಸೃಷ್ಟಿಯಲಿ; ನರನಂತೆ ನರನಿಲ್ಲ |

ಕ್ಷಮೆಯುಮವಳೊಳಗಿಲ್ಲ; ಕರ್ಮದಂತೆ ಫಲ ||

ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತೆ |

ನಮಗವಳ್ ಪ್ರಸ್ಪರ್ಧಿ – ಮಂಕುತಿಮ್ಮ || ಕಗ್ಗ ೩೫೦ ||

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |

ತಾನದಾರೊಳೊ ವಾದಿಸುವನಂತೆ ಬಾಯಿಂ ||

ದೇನನೋ ನುಡಿಯುತ್ತ ಕೈಸನ್ನೆಗೈಯುವನು |

ಭಾನವೊಂದರೊಳೆರಡು – ಮಂಕುತಿಮ್ಮ || ಕಗ್ಗ ೩೫೧ ||

ಕೈಕೇಯಿ ಸತ್ಯಭಾಮೆಯರಂಶವಿರದ ಪೆಣ್ |

ಲೋಕದೊಳಗಿರಳು; ಬೆಳೆವುದು ಲೋಕವವರಿಂ ||

ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ |

ಬೇಕದಕೆ ನಗು ಸಹನೆ – ಮಂಕುತಿಮ್ಮ || ಕಗ್ಗ ೩೫೨ ||

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು |

ಒಳಿತನಾಗಿಸು; ಕೊಡುತ ಕೊಳುತ ಸಂತಸವ ||

ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು |

ಮಿಳಿತನಿರು ವಿಶ್ವದಲಿ – ಮಂಕುತಿಮ್ಮ || ಕಗ್ಗ ೩೫೩ ||

ನಾಚಿಕೆಯನಾಗಿಪುವು ನಮ್ಮ ಸುಖದಾತುರದ |

ಯೋಚನೆಗಳವನು ಮರುವಗಲು ಪರಿಕಿಸಲು ||

ಚಾಚಿದ್ದ ರಸನೆ ತಾನೊಳಸೇದಿಕೊಳ್ಳುವುದು |

ರೇಚನವದಾತ್ಮಕ್ಕೆ – ಮಂಕುತಿಮ್ಮ || ಕಗ್ಗ ೩೫೪ ||

ಕೆಟ್ಟ ಪ್ರಪಂಚವಿದು; ಸುಟ್ಟ ಕರಿ ನರಮನಸು |

ಬಿಟ್ಟುಬಿಡಲರಿದದನು; ಕಟ್ಟಿಕೊಳೆ ಮಷ್ಟು ||

ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು |

ಗಟ್ಟಿ ಪುರುಳೇನಲ್ಲ – ಮಂಕುತಿಮ್ಮ || ಕಗ್ಗ ೩೫೫ ||

ಗುಡಿಸಿಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ |

ಬಡವನಲಿ ಕೊರತೆಗಳ ನೆಡುವುದರಿದಲ್ಲ ||

ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು |

ಕೊಡಲಹುದವಂಗೆ ನೀಂ? – ಮಂಕುತಿಮ್ಮ || ಕಗ್ಗ ೩೫೬ ||

ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ |

ಕೊಡು ಸಲಿಸು ಸೇವೆಗೈಯೆನ್ನುವುದು ಕರುಣೆ ||

ಬಿಡು ನೀನು ನಾನುಗಳ; ವಿಶ್ವಾತ್ಮಪದವನೀ- |

ನಡರೆನ್ನುವುದು ಶಾಂತಿ – ಮಂಕುತಿಮ್ಮ || ಕಗ್ಗ ೩೫೭ ||

ನೇತ್ರಯುಗಳಂ ಪಿಡಿಗುಮೊಂದು ಲಕ್ಷ್ಯವ ಕೂಡಿ |

ಹಸ್ತಯುಗ ಸಾಧಿಪುದು ಮನದರ್ಥವೊಂದನ್ ||

ದ್ವೈತದಿಂದದ್ವೈತವದ್ವೈತದೊಳ್ ದ್ವೈತ |

ಚೈತನ್ಯಲೀಲೆಯಿದು – ಮಂಕುತಿಮ್ಮ || ಕಗ್ಗ ೩೫೮ ||

ಕಾಯವನು ಮೃದ್ಭಾಂಡ ಮಾಂಸಪಿಂಡವೆನುತ್ತೆ |

ಹೇಯವೆಂದೆಂದೊಡಾತ್ಮಂಗಪ್ಪುದೇನು? ||

ಆಯುಧವನದನು ತೊರೆದಾತ್ಮನೇಂಗೈದಪನು? |

ನ್ಯಾಯ ತನುವಿಗಮಿರಲಿ – ಮಂಕುತಿಮ್ಮ || ಕಗ್ಗ ೩೫೯ ||

ಪರದ ಮೇಲ್ಕಣ್ಣಿಟ್ಟು ಧರೆಯ ತುಚ್ಛವೆನುತ್ತ |

ತೊರೆದಾಯಸಂಗೊಳ್ಳೆ ದೊರೆವ ಫಲವೇನು? ||

ಸುರಧನುವಿಗೇಣಿಯಿಡಹೊರಟು ನಿನ್ನಂಗಳದ |

ಕಿರಿಹೂವ ಮರೆಯುವೆಯ – ಮಂಕುತಿಮ್ಮ || ಕಗ್ಗ ೩೬೦ ||

ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ |

ಸರ್ವವನು ತನ್ನಾತ್ಮವೆಂದು ಬದುಕುವನು ||

ನಿರ್ವಿಕಾರಾಂತರಂಗದಿ ಜಗವ ಧರಿಸುವನು |

ಸರ್ವಮಂಗಳನವನು – ಮಂಕುತಿಮ್ಮ || ಕಗ್ಗ ೩೬೧ ||

ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ |

ಜಗವ ಸುಡುಗಾಡೆನುವ ಕಟುತಪಸು ಬೇಡ ||

ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ |

ಮಿಗೆಚಿಂತೆ ತಲೆಹರಟೆ – ಮಂಕುತಿಮ್ಮ || ಕಗ್ಗ ೩೬೨ ||

ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ |

ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ||

ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |

ಸತ್ಯ ಜಗದಲಿ ಕಾಣೊ – ಮಂಕುತಿಮ್ಮ || ಕಗ್ಗ ೩೬೩ ||

ಸೌಂದರ್ಯ ಬಾಂಧವ್ಯಗಳನು ಬರಿದೆನಲಹುದೆ? |

ಹೊಂದಿಸವೆ ಕುಂದಿಸವೆ ಜೀವಿಗಳನವುಗಳ್? ||

ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು |

ಅಂದಿಕೊಳಲದು ಬರಿದೆ? – ಮಂಕುತಿಮ್ಮ || ಕಗ್ಗ ೩೬೪ ||

ತಲೆ ಕೊಡವ ತಳೆದಿರಲು; ಕೈ ಕತ್ತಿ ಪಿಡಿದಿರಲು |

ಬಳುಕು ಹಗ್ಗದ ಮೇಲೆ ತಾನಡಿಯನಿಡುತ ||

ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ |

ಕಲೆಯೆ ಜೀವನಯೋಗ – ಮಂಕುತಿಮ್ಮ || ಕಗ್ಗ ೩೬೫ ||

ಹೃದಯಕೊಪ್ಪುವ ಭಾಷೆ ರಾಗಲಯ ವಿಸ್ತಾರ |

ಪದ ಚರ್ಚೆ ಮತಿವಿಚಾರಕೆ ತಕ್ಕ ಭಾಷೆ ||

ಹೃದಯ ಮತಿ ಸತಿಪತಿಗಳಂತಿರಲು ಯುಕ್ತವದು |

ಬದುಕು ರಸತರ್ಕೈಕ್ಯ – ಮಂಕುತಿಮ್ಮ || ಕಗ್ಗ ೩೬೬ ||

ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ |

ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ||

ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು |

ಒದವಿಪರು ದಿಟದರಿವ – ಮಂಕುತಿಮ್ಮ || ಕಗ್ಗ ೩೬೭ ||

ಅನುಭವದ ಪಾಲೊಳು ವಿಚಾರ ಮಂಥನವಾಗೆ |

ಜನಿಯಿಕುಂ ಜ್ಞಾನನವನೀತವದೆ ಸುಖದಂ ||

ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |

ನಿನಗೆ ಧರುಮದ ದೀಪ – ಮಂಕುತಿಮ್ಮ || ಕಗ್ಗ ೩೬೮ ||

ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ! |

ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ||

ನಿನ್ನೊಡಲೆ ಚಿತೆ; ಜಗದ ತಂಟೆಗಳೆ ಸವುದೆಯುರಿ |

ಮಣ್ಣೆ ತರ್ಪಣ ನಿನಗೆ – ಮಂಕುತಿಮ್ಮ || ಕಗ್ಗ ೩೬೯ ||

ಎಲೆಗಳನು ಕಡ್ಡಿ; ಕಡ್ಡಿಯ ರಂಬೆಕೊಂಬೆಗಳು |

ತಳೆದು ಪೆರ್ಚಿಸುತಿಹುವು ಮರದ ಬಾಳ್ಸಿರಿಯ ||

ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು |

ಹಳಿಯದಿರು ನಿನ್ನಿರವ – ಮಂಕುತಿಮ್ಮ || ಕಗ್ಗ ೩೭೦ ||

ಜೀವಕಾರಣಮೂಲ ಗೂಢವಾಗಿರ್ದೊಡಂ |

ಧೀವಿಕಾಸದ ಬೆಳಕನಾದನಿತು ಗಳಿಸಿ ||

ಕೈವಲ್ಯಪಥವನರಸುತ ಯಾತ್ರಿಸಲೆಬೇಕು |

ದೀವಿಗೆಯು ಮತಿಯೊಂದೆ – ಮಂಕುತಿಮ್ಮ || ಕಗ್ಗ ೩೭೧ ||

ಎತ್ತೆತ್ತ ನೋಡಲುಂ ಗುಪ್ತಭೂತಗಳಯ್ಯ! |

ಕತ್ತಲೆಯೊಳಾಡುತಿಹ ದೆವ್ವಗಳ ಸುಳಿವು ||

ಮುತ್ತಿ ಮುಸುಕಿಹುದು ಜೀವವ ರಹಸ್ಯವದೊಂದು |

ಬೆತ್ತಲೆಯದಹುದೆಂತು? – ಮಂಕುತಿಮ್ಮ || ಕಗ್ಗ ೩೭೨ ||

ನೈರಾಶ್ಯನಿರತಂಗೆ ದೇವತೆಗಳಿಂದೇನು? |

ವೈರಾಗ್ಯಪಥಿಕಂಗೆ ನಷ್ಟಭಯವೇನು? ||

ಪಾರಂಗತಂಗಂತರಾಳ ದೂರಗಳೇನು? |

ಸ್ವೈರಪಥವಾತನದು – ಮಂಕುತಿಮ್ಮ || ಕಗ್ಗ ೩೭೩ ||

ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು? |

ಒಲುಮೆಕರುಳಡಗಿಹುದು ಪಗೆತನದ ಪೊಡೆಯೊಳ್ ||

ನಲುಮೆಯನು ಹೊರಹೊಮ್ಮಿಸುವುದು ನರನುನ್ನತಿಕೆ |

ಒಲವಾತ್ಮ ವಿಸ್ತರಣ – ಮಂಕುತಿಮ್ಮ || ಕಗ್ಗ ೩೭೪ ||

ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ್ಯಕ್ಷ- |

ನೊಂದರಿಂ ಮಾಯೆಯಾಟವ ಮೀರುವಂತೆ ||

ಇಂದ್ರಿಯಾತೀತದರ್ಶನಕೆ ಬೇರೊಂದಕ್ಷಿ |

ಸಂಧಾನವನು ಗಳಿಸೊ – ಮಂಕುತಿಮ್ಮ || ಕಗ್ಗ ೩೭೫ ||

ಸೃಷ್ಟಿಚೋದನೆಗಳಿಂ ನರನೊಳಿಷ್ಟಗಳುದಯ- |

ವಿಷ್ಟಸಿದ್ಧಿಗೆ ಯಂತ್ರತಂತ್ರಗಳ ಯುಕ್ತಿ ||

ತ್ವಷ್ಟೃಕುಶಲದೆ ಸೃಷ್ಟಿವಿಕೃತಿ; ಇಂತನ್ಯೋನ್ಯ- |

ಸ್ಪೃಷ್ಟರ್ ಪ್ರಕೃತಿ ನರರು – ಮಂಕುತಿಮ್ಮ || ಕಗ್ಗ ೩೭೬ ||

ಆವ ಜನ್ಮದ ಋಣವೊ; ಆವ ಕರ್ಮದ ಕಣವೊ |

ಮಾವಾಗಿ ಬೇವಾಗಿ ಸಂಸಾರ ವನದಿ ||

ಜೀವಕೀಂಟಿಪುವು ಮಾದಕದ ರಸಪಾನಗಳ |

ಭಾವಜ್ವರಂಗಳವು – ಮಂಕುತಿಮ್ಮ || ಕಗ್ಗ ೩೭೭ ||

ಮರವ ನೀನರಿಯುವೊಡೆ ಬುಡವ ಕೀಳಲುಬೇಡ |

ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ||

ಎರೆ ನೀರ; ಸುರಿ ಗೊಬ್ಬರವ; ಕೆದಕು ಪಾತಿಯನು |

ನಿರುಕಿಸುತ ತಳಿರಲರ – ಮಂಕುತಿಮ್ಮ || ಕಗ್ಗ ೩೭೮ ||

ಶರನಿಧಿಯನೀಜುವನು; ಸಮರದಲಿ ಕಾದುವನು |

ಗುರಿಯೊಂದನುಳಿದು ಪೆರತೊಂದ ನೋಡುವನೆ? ||

ಮರೆಯುವನು ತಾನೆಂಬುದನೆ ಮಹಾವೇಶದಲಿ |

ನಿರಹಂತೆಯದು ಮೋಕ್ಷ – ಮಂಕುತಿಮ್ಮ || ಕಗ್ಗ ೩೭೯ ||

ಆವ ಜೀವದ ಪಾಕವಾವನುಭವದಿನಹುದೊ! |

ಆವ ಪಾಪಕ್ಷಯವದಾವ ಪುಣ್ಯದಿನೋ! ||

ಕಾವಿರದೆ ಪಕ್ವವಹ ಜೀವವಿಳೆಯೊಳಗಿರದು |

ನೋವೆಲ್ಲ ಪಾವಕವೊ – ಮಂಕುತಿಮ್ಮ || ಕಗ್ಗ ೩೮೦ ||

ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? |

ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ||

ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? |

ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ || ಕಗ್ಗ ೩೮೧ ||

ನರನಾರಿಮೋಹದಿಂ ವಂಶವದಕಾಗಿ ಮನೆ |

ನೆರೆ ಹೊರೆಗಳೂರು ರಾಷ್ಟ್ರಗಳು ಸಂಘಗಳು ||

ಕೆರೆಯೊಂದು ಕೇಂದ್ರದಿಂದಲೆಯ ಬಳೆಗಳು ನೂರು |

ಹರಿವಂತೆ ಸಂಸಾರ – ಮಂಕುತಿಮ್ಮ || ಕಗ್ಗ ೩೮೨ ||

ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಮ್ |

ಇಕ್ಷುದಂಡದವೊಲದು ಕಷ್ಟಭೋಜನವೆ ||

ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |

ಮಾಕ್ಷಿಕರು ಮಿಕ್ಕೆಲ್ಲ – ಮಂಕುತಿಮ್ಮ || ಕಗ್ಗ ೩೮೩ ||

ಆಶೆ ಮಂಥರೆ; ನರವಿವೇಚನೆಯೆ ಕೈಕೇಯಿ |

ಬೀಸೆ ಮನದುಸಿರು ಮತಿದೀಪವಲೆಯುವುದು ||

ವಾಸನೆಗಳನುಕೂಲ ಸತ್ಯತರ್ಕತೆ ಶೂಲ |

ಶೋಷಿಸಾ ವಾಸನೆಯ – ಮಂಕುತಿಮ್ಮ || ಕಗ್ಗ ೩೮೪ ||

ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? |

ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ||

ಮತ್ತು ಮತ್ತನುವರ್ತಿಸುತ; ಭಂಗವಾದಂದು |

ಯತ್ನಿಸಿನ್ನುಂ ಮರಳಿ – ಮಂಕುತಿಮ್ಮ || ಕಗ್ಗ ೩೮೫ ||

ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? |

ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ||

ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ |

ಅನಲನೆಲ್ಲರೊಳಿಹನು – ಮಂಕುತಿಮ್ಮ || ಕಗ್ಗ ೩೮೬ ||

ಸೈನಿಕನು ನೀನು; ಸೇನಾಧಿಪತಿಯೆಲ್ಲಿಹನೊ! |

ಆಣತಿಯ ಕಳುಹುತಿಹನದನು ನೀನರಿತು ||

ಜಾಣಿನಧಟಿಂ ಪೋರು; ಸೋಲುಗೆಲವವನೆಣಿಕೆ |

ಕಾಣಿಸದನಾಳ್ಕೆಯದು – ಮಂಕುತಿಮ್ಮ || ಕಗ್ಗ ೩೮೭ ||

ಆತುರತೆಯಿರದ ಸತತೋದ್ಯೋಗ ಸರ್ವಹಿತ |

ಭೂತದಾವೇಶವಾತುರತೆಯಾತ್ಮಕ್ಕೆ ||

ಕಾತರನು ನೀನಾಗೆ ಮೂರನೆಯ ಸಹಭಾಗಿ |

ಪ್ರೀತನಾಗುವನೇನೊ? – ಮಂಕುತಿಮ್ಮ || ಕಗ್ಗ ೩೮೮ ||

ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? |

ಇಕ್ಕುವರದಾರದನು ಕರೆದು ತಿರುಪೆಯನು? |

ರೆಕ್ಕೆ ಪೋದಂತಲೆದು; ಸಿಕ್ಕಿದುದನುಣ್ಣುವುದು |

ತಕ್ಕುದಾ ವ್ರತ ನಿನಗೆ – ಮಂಕುತಿಮ್ಮ || ಕಗ್ಗ ೩೮೯ ||

ನಲಿಸುವೊಲಿಸುವ; ಕೆಣಕಿ ಕಾಡಿಸುವ; ಮುಳಿಯಿಸುವ |

ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ ||

ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ |

ಇಳೆಯಂಚೆಯಾಳು ನೀಂ – ಮಂಕುತಿಮ್ಮ || ಕಗ್ಗ ೩೯೦ ||

ಪ್ರತ್ಯೇಕಸುಖವಲ್ಪದುದು; ಗಳಿಗೆತೋರ್ಕೆಯದು |

ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ||

ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ |

ಒಟ್ಟು ಬಾಳ್ವುದ ಕಲಿಯೊ – ಮಂಕುತಿಮ್ಮ || ಕಗ್ಗ ೩೯೧ ||

ಮಿತ ನಿನ್ನ ಗುಣ ಶಕ್ತಿ; ಮಿತ ನಿನ್ನ ಕರ್ತವ್ಯ |

ಮಿತ ಅತಿಗಳಂತರವ ಕಾಣುವುದೆ ಕಡಿದು ||

ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು |

ಕೃತಿಯಿರಲಿ ದೈವಕಂ – ಮಂಕುತಿಮ್ಮ || ಕಗ್ಗ ೩೯೨ ||

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು |

ಅಸಮಂಜಸದಿ ಸಮನ್ವಯ ಸೂತ್ರ ನಯವ ||

ವೆಸನಮಯ ಸಂಸಾರದಲಿ ವಿನೋದವ ಕಾಣ್ಬ |

ರಸಿಕತೆಯೆ ಯೋಗವೆಲೊ – ಮಂಕುತಿಮ್ಮ || ಕಗ್ಗ ೩೯೩ ||

ಏನೇನು ಹಾರಾಟ ಸುಖಕೆಂದು ಲೋಕದಲಿ |

ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ||

ನೀನೆ ಕೈ ಬೀಸಿಕೊಳೆ ನೋವು ಬೆವರುಗಳೆ ಫಲ |

ಮಾಣು ಮನದುಬ್ಬಸವ – ಮಂಕುತಿಮ್ಮ || ಕಗ್ಗ ೩೯೪ ||

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- |

ದಂತರಂಗದ ಕಡಲು ಶಾಂತಿಗೊಳಲಹುದು ||

ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |

ಸಂತಯಿಸು ಚಿತ್ತವನು – ಮಂಕುತಿಮ್ಮ || ಕಗ್ಗ ೩೯೫ ||

ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ |

ಹರಿದಾಡಿದಂತಾಗೆ ನೋಳ್ಪವಂ ಬೆದರಿ ||

ಸುರಿಸುವಾ ಬೆವರು ದಿಟ; ಜಗುವುಮಂತುಟೆ ದಿಟವು |

ಜರೆಯದಿರು ತೋರ್ಕೆಗಳ – ಮಂಕುತಿಮ್ಮ || ಕಗ್ಗ ೩೯೬ ||

ಮಲಗಿದೋದುಗನ ಕೈಹೊತ್ತಗೆಯು ನಿದ್ದೆಯಲಿ |

ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ||

ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು |

ಸಡಿಲುವುವು ಬಾಳ್ ಮಾಗೆ – ಮಂಕುತಿಮ್ಮ || ಕಗ್ಗ ೩೯೭ ||

ಮೂಲವಸ್ತುವದೊಂದು ಲೀಲೆಗೋಸುಗ ನೂರು |

ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||

ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ |

ಆಳುತಿರು ಜೀವನವ – ಮಂಕುತಿಮ್ಮ || ಕಗ್ಗ ೩೯೮ ||

ನಂಬದಿರ್ದನು ತಂದೆ; ನಂಬಿದನು ಪ್ರಹ್ಲಾದ |

ನಂಬಿಯುಂ ನಂಬದಿರುವಿಬ್ಬಂದಿ ನೀನು ||

ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |

ಸಿಂಬಳದಿ ನೊಣ ನೀನು – ಮಂಕುತಿಮ್ಮ || ಕಗ್ಗ ೩೯೯ ||

ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ |

ಕೋಟಿ ನಟರಾಂತಿಹರು ಚಿತ್ರಪಾತ್ರಗಳ ||

ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ |

ನೋಟಕರು ಮಾಟಕರೆ – ಮಂಕುತಿಮ್ಮ || ಕಗ್ಗ ೪೦೦ ||

bottom of page